ಕುತ್ಪಾಡಿಯ ಎಸ್ಡಿಎಂ ಕಾಲೇಜಿನಲ್ಲಿ ಮಹಿಳಾ ದಿನ ಆಚರಿಸಲಾಯಿತು. ರಶ್ಮಿ ಎಸ್.ಆರ್., ಎ. ಲಕ್ಷ್ಮೀಬಾಯಿ, ಡಾ. ಮಮತಾ ಕೆ.ವಿ., ಡಾ. ಶ್ರೀಲತಾ ಕೆ., ಡಾ. ಲಿಖಿತಾ ಡಿ.ಎನ್. ಇತರರಿದ್ದರು.
* ಕುಂದಾಪುರದ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್. ಅನಿಸಿಕೆ
* ಕುತ್ಪಾಡಿಯ ಎಸ್ಡಿಎಂ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಉಡುಪಿ: ವೈದ್ಯಕೀಯ ವಿದ್ಯಾರ್ಥಿಗಳು ಕೇವಲ ಚಿಕಿತ್ಸೆಗೆ ಸೀಮಿತವಾಗದೆ ನಾಗರಿಕ ಸೇವಾ ಪರೀಕ್ಷೆಗಳಾದ ಯುಪಿಎಸ್ಸಿ, ಕೆಎಎಸ್ ಕಡೆಗೂ ಗಮನ ಹರಿಸಬೇಕು. ಆಡಳಿತ ಸೇವೆಯಲ್ಲಿ ಜನಸಾಮಾನ್ಯರಿಗೆ ಸೇವೆ ಸಲ್ಲಿಸಲು ಅಪಾರ ಅವಕಾಶಗಳಿವೆ ಎಂದು ಕುಂದಾಪುರದ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್. ತಿಳಿಸಿದರು.
ಕುತ್ಪಾಡಿಯಲ್ಲಿರುವ ಎಸ್ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಉಡುಪಿಯಲ್ಲಿ ಐಕ್ಯುಎಸಿ, ಆಂತರಿಕ ದೂರು ಸಮಿತಿ ಹಾಗೂ ಸಾಹಿತ್ಯ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಸೇವೆಯಲ್ಲಿದೆ ಸಾರ್ಥಕತೆ
ನಿವೃತ್ತ ಪ್ರಾಂಶುಪಾಲೆ ಎ. ಲಕ್ಷ್ಮೀಬಾಯಿ ಮಾತನಾಡಿ, ಜೀವನದಲ್ಲಿ ಎದುರಾಗುವ ವೈವಿಧ್ಯಮಯ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಕೇವಲ ಹಣಕ್ಕಾಗಿ ವೃತ್ತಿ ಮಾಡದೆ ಪ್ರೀತಿ ಮತ್ತು ತೃಪ್ತಿಯಿಂದ ನಿರ್ವಹಿಸಿದಾಗ ಮಾತ್ರ ಸೇವೆಯಲ್ಲಿ ಸಾರ್ಥಕತೆ ಸಿಗುತ್ತದೆ ಎಂದರು.
ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ 'ಆಯುರ್ವೇದದಲ್ಲಿ ನೂತನ ಪಾಕಪದ್ಧತಿ' ಎಂಬ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಪ್ರಕಟಿಸಲಾಯಿತು. ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥ ಡಾ. ವಿಜಯ್ ನೆಗ್ಲೂರು ಹಾಗೂ ಅಗದತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಶುಭಾ ಪಿ.ಯು. ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಡೀನ್ ಡಾ. ಶ್ರೀಲತಾ ಕೆ. ಉಪಸ್ಥಿತರಿದ್ದರು. ಐಸಿಸಿ ಸಮಿತಿ ಸದಸ್ಯೆ ಡಾ. ಲಿಖಿತಾ ಡಿ.ಎನ್. ಸ್ವಾಗತಿಸಿದರು, ಡಾ. ತೇಜಸ್ವಿ ಐ. ನಾಯ್ಕ್ ಅತಿಥಿಗಳನ್ನು ಪರಿಚಯಿಸಿದರು. ಡಾ. ಲಿಖಿತಾ ಎಚ್. ಕೆ. ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಡಾ. ಆಶಾ ಗುರುಕೃಪಾ ರಾವ್ ವಂದಿಸಿದರು. ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಸಿಮ್ರನ್ ಖರೋಶಿ ಕಾರ್ಯಕ್ರಮ ನಿರೂಪಿಸಿದರು. ಐಸಿಸಿ ಸಮಿತಿಯ ಅಧ್ಯಕ್ಷೆ ಡಾ. ಚೈತ್ರಾ ಮಾರ್ಗದರ್ಶನ ನೀಡಿದರು.