ತ್ರಾಸಿ ಬೀಚ್‌ನಲ್ಲಿರುವ ಶೌಚಗೃಹದ ಪೈಪ್‌ಲೈನ್ ಒಡೆದು ಹೋಗಿ ಕೊಳಚೆ ನೀರು ನಿಂತಿರುವುದು.  
ಉಡುಪಿ

ಅಭಿವೃದ್ಧಿಯೊಂದಿಗೆ ಅವ್ಯವಸ್ಥೆ ಆಗರ!

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಸಿದ್ಧ ತ್ರಾಸಿ ಬೀಚ್‌ನಲ್ಲಿರುವ ಸಾರ್ವಜನಿಕ ಶೌಚಗೃಹ ಪೈಪ್‌ಲೈನ್ ಒಡೆದು ಹೋಗಿದ್ದು, ಶೌಚಗೃಹದ ಮಲಮೂತ್ರ ಸೋರಿಕೆಯಾಗಿ ಸಾರ್ವಜನಿಕ ಸ್ಥಳದಲ್ಲಿ ನಿಂತು ದುರ್ನಾತ ಬೀರುತ್ತಿದೆ.
ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸಿ ಮೋಜು ಮಸ್ತಿ ಮಾಡುವ ತ್ರಾಸಿ ಬೀಚ್ ಅಭಿವೃದ್ಧಿಗೆ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದ್ದು, ಬೀಚ್‌ನಲ್ಲಿ ಅವ್ಯವಸ್ಥೆ ಮಾತ್ರ ಕಡಿಮೆಯಾಗಿಲ್ಲ. ಬೀಚ್‌ನಲ್ಲಿರುವ ಶೌಚಗೃಹದ ಪೈಪ್ ಪಡೆದು ಹೋಗಿ ಅನೇಕ ದಿನಗಳು ಕಳೆದಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಥವಾ ಗುತ್ತಿಗೆದಾರರು ಪೈಪ್‌ಲೈನ್ ದುರಸ್ತಿಗೆ ಮುಂದಾಗಿಲ್ಲ.

ಸಾರ್ವಜನಿಕರಲ್ಲಿ ಅಸಮಾಧಾನ

ಶೌಚಗೃಹದಿಂದ ಹೊರಹೊಮ್ಮುತ್ತಿರುವ ಮಲಮೂತ್ರ ನೀರು ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳಲ್ಲಿ ಹರಿದು ದುರ್ವಾಸನೆ ಬೀರುತ್ತಿದ್ದು, ಬೀಚ್‌ಗೆ ಭೇಟಿ ನೀಡುವ ಪ್ರವಾಸಿಗರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಗೃಹದ ಹಿಂದೆ ನಿಂತಿರುವ ತ್ಯಾಜ್ಯ ನೀರಿನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಮಳೆಗಾಲ ಸಂದರ್ಭ ಡೆಂಘೆ, ಮಲೇರಿಯಾ ಮೊದಲಾದ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಸ್ವಚ್ಛತೆ ಮತ್ತು ಪ್ರವಾಸೋದ್ಯಮ ದೃಷ್ಟಿಯಿಂದ ಮಹತ್ವದ ಪ್ರದೇಶವಾಗಿರುವ ತ್ರಾಸಿ ಬೀಚ್‌ನಲ್ಲಿ ಇಂತಹ ಅವ್ಯವಸ್ಥೆ ಕಂಡು ಬಂದಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

9 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ

ತ್ರಾಸಿ ಬೀಚ್‌ನಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಶೌಚಗೃಹದ ಅಭಿವೃದ್ಧಿ ಕೂಡ ಇದರಲ್ಲಿ ಸೇರಿವೆ. ಸರ್ಕಾರ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಸ್ವಚ್ಛತೆಗಾಗಿ ಸಾಕಷ್ಟು ಪ್ರಯತ್ನದ ಜತೆಗೆ ಯೋಜನೆ ರೂಪಿಸುತ್ತಿದ್ದು, ಇಲ್ಲಿ ಮಾತ್ರ ಸ್ವಚ್ಛತೆ ಎಂಬ ಪದಕ್ಕೆ ಅಪವಾದ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತ್ರಾಸಿ ಬೀಚ್‌ನಲ್ಲಿರುವ ಶೌಚಗೃಹದ ತ್ಯಾಜ್ಯ ನೀರು ಹೋಗುವ ಪೈಪ್‌ಲೈನ್ ಒಡೆದು ಹೋಗಿ ಅನೇಕ ದಿನಗಳು ಕಳೆದಿದ್ದರೂ ಅದನ್ನು ದುರಸ್ತಿ ಮಾಡಲು ಅಧಿಕಾರಿಗಳು, ಸಂಬಂಧಪಟ್ಟ ಗುತ್ತಿಗೆದಾರರು ನಿರ್ಲಕ್ಷೃ ವಹಿಸುತ್ತಿದ್ದಾರೆ. ಶೌಚಗೃಹದ ತ್ಯಾಜ್ಯ ನೀರಿನಿಂದ ಪರಿಸರದಲ್ಲಿ ದುರ್ನಾತ ಬೀರುತ್ತಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಸಂಬಂಧಪಟ್ಟವರು ಸಮಸ್ಯೆಯನ್ನು ತಕ್ಷಣ ಪರಿಹರಿಸಿ, ಶೌಚಗೃಹ ವ್ಯವಸ್ಥೆಯನ್ನು ಸುಧಾರಿಸಬೇಕು.

— ದಾಮೋದರ ಸ್ಥಳೀಯ ನಿವಾಸಿ, ತ್ರಾಸಿ