ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ವಿಶಿಷ್ಟ ಪ್ರಭೇದ 'ಮಲಬಾರ್ ಟ್ರೀ ಟೋಡ್' ಕಪ್ಪೆ.
* ಅರಣ್ಯ ಇಲಾಖೆಯಿಂದ ಶೀಘ್ರವೇ ಘೋಷಣೆ ಸಾಧ್ಯತೆ
ಉಡುಪಿ: ರಾಜ್ಯ ಪ್ರಾಣಿ, ರಾಜ್ಯ ಪಕ್ಷಿ, ರಾಜ್ಯ ಮರ ಹಾಗೂ ರಾಜ್ಯ ಚಿಟ್ಟೆ ಇರುವಂತೆ ಕಪ್ಪೆಗೂ ರಾಜ್ಯ ಗೌರವ ಸಿಗುವ ಸಾಧ್ಯತೆಯಿದೆ. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುವ ಸ್ಥಳೀಯ ಮತ್ತು ಅತ್ಯಂತ ವಿಶೇಷ ಕಪ್ಪೆ ಪ್ರಬೇಧವಾದ 'ಮಲಬಾರ್ ಟ್ರೀ ಟೋಡ್'ಗೆ 'ರಾಜ್ಯ ಉಭಯಜೀವಿ' ಮಾನ್ಯತೆ ಘೋಷಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳುವ ಮುನ್ಸೂಚನೆ ಲಭಿಸಿದೆ.
ಮಲಬಾರ್ ಟ್ರೀ ಟೋಡ್ ಪ್ರಬೇಧವನ್ನು ರಾಜ್ಯ ಕಪ್ಪೆಯಾಗಿ ಘೋಷಿಸುವಂತೆ ಕಪ್ಪೆ ಸಂಶೋಧಕ ಡಾ.ಗುರುರಾಜ ಕೆ.ವಿ. 2020ರ ಸೆಪ್ಟೆಂಬರ್ನಲ್ಲಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)ಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದು 2021ರ ಜನವರಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಯ ಮುಂದೆ ಬಂದಿತ್ತು. ಇದೀಗ ಅರಣ್ಯ ಇಲಾಖೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ.
ಮಲಬಾರ್ ಟ್ರೀ ಟೋಡ್ ಕಪ್ಪೆಯನ್ನು 'ರಾಜ್ಯ ಉಭಯಜೀವಿ' ಎಂದು ರಾಜ್ಯ ಸರ್ಕಾರ ಘೋಷಿಸಿದರೆ ದೇಶದಲ್ಲೇ ಕರ್ನಾಟಕ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಪಡೆಯಲಿದೆ. ಇನ್ನಿತರ ಯಾವುದೇ ರಾಜ್ಯದಲ್ಲೂ ರಾಜ್ಯ ಕಪ್ಪೆ ಅಥವಾ ಉಭಯಜೀವಿ ಇಲ್ಲ. ಆದರೆ, ಕೇರಳ ರಾಜ್ಯದಲ್ಲಿ ಪರ್ಪಲ್ ಫ್ರಾಗ್ಅನ್ನು ರಾಜ್ಯ ಕಪ್ಪೆಯಾಗಿ ಘೋಷಿಸುವಂತೆ ಶಿಫಾರಸು ಮಾಡಲಾಗಿದೆ.
ದೇಶಾದ್ಯಂತ ಹರಡಿಕೊಂಡಿರುವ ಪ್ರಭೇದ
ಕರ್ನಾಟಕದಲ್ಲಿ ಈವರೆಗೆ ಒಟ್ಟು 116 ಕಪ್ಪೆ ಪ್ರಭೇದ ಗುರುತಿಸಲಾಗಿದೆ. ಪಶ್ಚಿಮ ಘಟ್ಟದಲ್ಲಿ 280ಕ್ಕಿಂತ ಅಧಿಕ ಕಪ್ಪೆ ಪ್ರಭೇದ ಗುರುತಿಸಲಾಗಿದೆ. ಅಳಿವಿನಂಚಿನಲ್ಲಿದ್ದ 'ಮಲಬಾರ್ ಟ್ರೀ ಟೋಡ್' ಕಪ್ಪೆಯನ್ನು ಮ್ಯಾಪಿಂಗ್ ಮಾಡಲು 2015ರಲ್ಲಿ ಅಭಿಯಾನ ಆರಂಭಿಸಲಾಯಿತು. ಈ ಕಪ್ಪೆಯನ್ನು ಎಲ್ಲಿಯಾದರೂ ನೋಡಿದರೆ ಪೋರ್ಟಲ್ನಲ್ಲಿ ವರದಿ ಮಾಡುವಂತೆ ಸೂಚಿಸಲಾಗಿತ್ತು. ದೇಶಾದ್ಯಂತ ನೂರಾರು ಕಡೆಗಳಲ್ಲಿ ಈ ಕಪ್ಪೆ ಕಂಡುಬಂದಿರುವ ಬಗ್ಗೆ ವರದಿಯಾಯಿತು. ಇದರಿಂದ ಈ ಕಪ್ಪೆ ಭಾರತದ ಪಶ್ಚಿಮ ಘಟ್ಟಗಳ ಎಲ್ಲ ಕಡೆ ಹರಡಿಕೊಂಡಿರುವುದು ದೃಢಪಟ್ಟಿತು. ಈ ಪ್ರಭೇದದ ಕಪ್ಪೆ ಎಲ್ಲ ಕಡೆ ಇದೆಯೆಂದು ಗುರುತಿಸಿರುವುದೇ ಜನರು. ರಾಜ್ಯದಲ್ಲಿ ನೂರಾರು ಬಗೆಯ ಕಪ್ಪೆಗಳಿದ್ದರೂ ಇದನ್ನೇ ಉಭಯಜೀವಿ ಎಂದು ಘೋಷಿಸಲು ಶಿಫಾರಸು ಮಾಡಲಾಗಿದೆ ಎಂದು ಕಪ್ಪೆ ಸಂಶೋಧಕ ಗುರುರಾಜ್ ಕೆ.ವಿ. ತಿಳಿಸಿದ್ದಾರೆ.
ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ವಿಶಿಷ್ಟ ಪ್ರಭೇದ 'ಮಲಬಾರ್ ಟ್ರೀ ಟೋಡ್' ಕಪ್ಪೆಯನ್ನು 'ರಾಜ್ಯ ಉಭಯ ಜೀವಿ' ಹಾಗೂ ತುಡುವೆ ಜೇನಿಗೆ 'ರಾಜ್ಯ ಕೀಟ' ಎಂದು ಘೋಷಿಸುವ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಇದೆ. ಈ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು.
— ಈಶ್ವರ ಬಿ. ಖಂಡ್ರೆ. ಅರಣ್ಯ ಸಚಿವ.