ತ್ವಲಹ್ ಯಾನೆ ಅನ್ವರ್ ಯಾನೆ ಅನ್ಸಾರ್ 
ಉಡುಪಿ

ದುಬೈಗೆ ಹೋಗಬೇಕಾದವ ಜೈಲಿಗೆ!

ಬೆಳ್ತಂಗಡಿ: ದುಬೈ ಉದ್ಯೋಗಕ್ಕಾಗಿ ತೆರಳಲು ಸಿದ್ಧತೆ ನಡೆಸಿದ್ದ ಯುವಕನೊಬ್ಬ ಗಾಂಜಾ ಹಾಗೂ ಎಂಡಿಎಂಎ ಮಾದಕ ವಸ್ತುಗಳ ಮಾರಾಟ ಯತ್ನದ ಆರೋಪದಲ್ಲಿ ಬೆಳ್ತಂಗಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಕುವೆಟ್ಟು ಗ್ರಾಮದ ಸುನ್ನತ್‌ಕೆರೆ ನಿವಾಸಿ ತ್ವಲಹ್ ಯಾನೆ ಅನ್ವರ್ ಯಾನೆ ಅನ್ಸಾರ್(21) ಬಂಧಿತ. ಪಿಲಿಚಂಡಿಕಲ್ಲು ಪ್ರದೇಶದ ಖಾಸಗಿ ಕಟ್ಟಡ ಮುಂಭಾಗದಲ್ಲಿ ಆಟೋರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆತ ಪೊಲೀಸ್ ವಾಹನವನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ಬಳಿ 1,498 ರೂ. ಮೌಲ್ಯದ 20 ಗ್ರಾಂ ಗಾಂಜಾ ಪತ್ತೆಯಾಗಿವೆ.
ವಿಚಾರಣೆ ನಡೆಸಿದಾಗ ಕುವೆಟ್ಟು ಗ್ರಾಮದ ಆಲಾದಿಕೊಟ್ಟಿಗೆ ನಿವಾಸಿ ಹಮ್ಜತ್ ಕರಾರ್ ಎಂಬಾತನಿಗೆ 20 ಸಾವಿರ ರೂ. ನೀಡಿ 500 ಗ್ರಾಂ ಗಾಂಜಾ ಖರೀದಿಸಿದ್ದು, ಆತ ಕಾರನ್ನು ಬಿಟ್ಟು ಪರಾರಿಯಾಗಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ ಅದರೊಳಗೆ 7.60 ಲಕ್ಷ ರೂ.ಮೌಲ್ಯದ 76 ಗ್ರಾಂ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಒಟ್ಟು 15,41,698 ರೂ.ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತ್ವಲಹ್ ಮತ್ತು ಹಮ್ಜತ್ ಕರಾರ್ ವಿರುದ್ಧ ಪ್ರಕರಣ ದಾಖಲಾದೆ. ಬಂಧಿತ ತ್ವಲಹ್‌ನನ್ನು ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದುಬೈಗೆ ತೆರಳುವವನಿದ್ದ

ಗುರುವಾರ ಸಂಜೆ ದುಬೈಗೆ ಉದ್ಯೋಗಕ್ಕಾಗಿ ತೆರಳಲು ಸಿದ್ಧತೆ ನಡೆಸಿದ್ದ ತ್ವಲಹ್ ಮಾದಕ ವಸ್ತು ಪ್ರಕರಣದಲ್ಲಿ ಸಿಕ್ಕಿಬಿದ್ದ ಪರಿಣಾಮ ವಿಮಾನ ಏರುವ ಬದಲು ಜೈಲು ಸೇರಬೇಕಾದ ಪರಿಸ್ಥಿತಿ ಎದುರಾಗಿದೆ.