ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅನುಪಮಾ ಶೆಣೈ ಮಾತನಾಡಿದರು.
* ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆರೋಪ
* ವಿಶೇಷ ಕಾರ್ಯ ಪಡೆಗೆ ಕಾನೂನಿನಲ್ಲಿದೆಯೇ ಮಾನ್ಯತೆ?
ಉಡುಪಿ: ಕರ್ನಾಟಕದಲ್ಲಿ ನಕ್ಸಲ್ ನಿಗ್ರಹವಾಗಿದೆ ಎಂದು ಎಎನ್ಎಫ್ (ನಕ್ಸಲ್ ನಿಗ್ರಹ ಪಡೆ) ಸಿಬ್ಬಂದಿ ಮೊಟಕುಗೊಳಿಸಿ ಕಳೆದ ವರ್ಷ ಜೂನ್ ತಿಂಗಳಲ್ಲಿ ದಕ ಜಿಲ್ಲೆ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗೆ ಮಾತ್ರ ಅನ್ವಯಿಸಿ ರಾಜ್ಯ ಕಾಂಗ್ರೆಸ್ ಸರ್ಕಾರವು ಎಎಸ್ಎಫ್ (ವಿಶೇಷ ಕಾರ್ಯ ಪಡೆ) ನೇಮಕ ಮಾಡಿತ್ತು. ಈ ಕಾರ್ಯಪಡೆಗೆ ಕಾನೂನಿನಲ್ಲಿ ಯಾವ ಮಾನ್ಯತೆ ಇದೆಯೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನರಿಗೆ ಉತ್ತರಿಸಬೇಕು ಎಂದು ಭಾರತೀಯ ಜನಶಕ್ತಿ ಕಾಂಗ್ರೆಸ್ (ರಿ.)ನ ಅಧ್ಯೆ, ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆಗ್ರಹಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಜು.11) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬುರುಡೆ ಗ್ಯಾಂಗ್ನ ನಕಲಿ ಕಾರ್ಯಾಚರಣೆಗೆ ಹಾಗೂ ಅವರ ರಕ್ಷಣೆಗೆ ಸಹಕಾರಿಯಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಎಎಸ್ಎಫ್ ಆರಂಭಿಸಿದೆ ಎಂದು ಆರೋಪಿಸಿದರು.
ಈ ಹಿಂದೆ ಡಿಕೆಶಿ ಉಪಮುಖ್ಯಮಂತ್ರಿ ಆಗಿದ್ದಾಗ ಕರಾವಳಿ ಜನರು ಕಾಂಗ್ರೆಸ್ಗೆ ಮತ ಹಾಕುವುದಿಲ್ಲ. ಹೀಗಾಗಿ ಕರಾವಳಿ ಭಾಗಕ್ಕೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಏಕೆ ಬೇಕು ಎಂದು ಕೇಳಿದ್ದರು. ಈಗ ಅವರೇ ಸಿಎಂ ಆಗಿದ್ದಾರೆ. ಹಾಗಾದರೆ ಕರಾವಳಿ ಭಾಗಕ್ಕೆ ಎಎಸ್ಎಫ್ ಯಾಕೆ ಬೇಕು? ಕೋಮು ಗಲಭೆ ನಿಯಂತ್ರಣಕ್ಕೆ ಎಂದು ಹೇಳುತ್ತಾರೆ. ಈ ಕೆಲಸ ಪೊಲೀಸ್ ಇಲಾಖೆಯದ್ದಲ್ಲವೇ? ಈ ಕಾರ್ಯಪಡೆ ಆರಂಭವಾದ ಕೇವಲ 20 ದಿನದ ಬಳಿಕ ಚಿನ್ನಯ್ಯ ಬುರುಡೆ ಹಿಡಿದುಕೊಂಡು ಬಂದಿದ್ದಾನೆ. ಬುರುಡೆ ಗ್ಯಾಂಗ್ ರಕ್ಷಣೆಗೇ ಈ ಪಡೆ ನೇಮಕ ಮಾಡಿದ್ದು. ಆದರೆ, ಚಿನ್ನಯ್ಯ ಲಗಾಟೆ ಹೊಡೆದ ಬಳಿಕ ಬುರುಡೆ ಗ್ಯಾಂಗ್ನ ಕತೆ ಮುಗಿದಿದೆ. ಆದರೆ, ಕರಾವಳಿಯಲ್ಲಿ ಈಗಲೂ ಏಕೆ ವಿಶೇಷ ಕಾರ್ಯಪಡೆ ಇದೆ ಎಂದು ಅನುಪಮಾ ಪ್ರಶ್ನಿಸಿದರು.
ಕಾರ್ಯಾಚರಣೆಯ ವರದಿ ಒಪ್ಪಿಸಿ
ಅನುಪಮಾ ಶೆಣೈ ಎಎಸ್ಎಫ್ ತಂಡ ರಚನೆಯಾಗಿ ವರ್ಷ ಕಳೆದಿದೆ. ಸುಧೀರ್ಕುಮಾರ್ ಎ.ಡಿ. ಅವರು ಇದರ ಮುಖ್ಯಸ್ಥರಾಗಿದ್ದಾರೆ. ಇನ್ನೂ ಸಹ ಈ ಪಡೆ ಯಾವೆಲ್ಲ ಕಾರ್ಯಾಚರಣೆ ಮಾಡಿದೆ ಎಂದು ವರದಿ ಒಪ್ಪಿಸಿಲ್ಲ. ಈ ಕುರಿತು ನಾನು 8 ತಿಂಗಳ ಹಿಂದೆ ಆರ್ಟಿಐ ಮೂಲಕ ಮಾಹಿತಿ ಕೇಳಿದ್ದೆ. ಆದರೆ. ಕಳೆದ ಜು.1ರಂದು ನಿಮ್ಮ ಅರ್ಜಿಯನ್ನು ಹಣಕಾಸು ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪತ್ರ ರವಾನಿಸಿದ್ದಾರೆ. ಸರ್ಕಾರಕ್ಕೆ ಈ ಕಾರ್ಯಪಡೆ ತನ್ನ ಸಾಧನೆ ವಿವರ ಸಲ್ಲಿಸಬೇಕು. ಅಥವಾ ಬುರುಡೆ ಗ್ಯಾಂಗ್ನ ರಕ್ಷಣೆಗಾಗಿಯೇ ಇದ್ದನ್ನು ಆರಂಭಿಸಿದ್ದಾಗಿತ್ತು ಎಂದು ಸರ್ಕಾರ ಒಪ್ಪಿಕೊಳ್ಳಬೇಕು. ಸಿಎಂ ಡಿಕೆಶಿ ಅವರು ಎಎಸ್ಎಫ್ ಎಂಬ ಬಿಳಿಯಾನೆ ಸಾಕುವುದನ್ನು ಬಿಟ್ಟು, ಅದಕ್ಕೆ ವಿನಯೋಗಿಸುವ ಹಣವನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕು ಎಂದು ಅನುಪಮಾ ಶೆಣೈ ಆಗ್ರಹಿಸಿದರು.