ಅಂಬ್ಲಮೊಗರು ಗ್ರಾಮದಲ್ಲಿ ಅಗೆಯಲಾದ ಗುಡ್ಡದ ಮೇಲ್ಭಾಗದಲ್ಲಿ ಅಪಾಯದ ಸ್ಥಿತಿಯಲ್ಲಿರುವ ನೀರಿನ ಟ್ಯಾಂಕ್.
ವಿಜಯವಾಣಿ ಸುದ್ದಿಜಾಲ, ಉಳ್ಳಾಲ
ಮಳೆಗಾಲದಲ್ಲಿ ರಸ್ತೆ ಮತ್ತು ಗುಡ್ಡ ಅಗೆಯುವ ಯಾವುದೇ ಕಾಮಗಾರಿಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ತಡೆ ಹೇರಿದ್ದರೂ, ಉಳ್ಳಾಲ ತಾಲೂಕಿನ ಅಂಬ್ಲಮೊಗರು ಗ್ರಾಮ ಪಂಚಾಯಿತಿ ಕಚೇರಿ ಸನಿಹದಲ್ಲೇ ನಿಯಮಬಾಹಿರವಾಗಿ ಬೃಹತ್ ಗುಡ್ಡವನ್ನು ಅಗೆದು ಸಮತಟ್ಟು ಮಾಡಲಾಗಿದೆ.
ಅಧಿಕಾರಿಗಳ ಕಣ್ಣೆದುರೇ ನಡೆದಿರುವ ಈ ಬೇಕಾಬಿಟ್ಟಿ ಮಣ್ಣು ಲೂಟಿಯಿಂದಾಗಿ, ಜಲಜೀವನ್ ಮಿಷನ್ ಯೋಜನೆಯಡಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 1 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಈಗ ಅಪಾಯದ ಅಂಚಿಗೆ ತಲುಪಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ಗುಡ್ಡ ಅಗೆಯಲು ಹಾಗೂ ಮಣ್ಣು ಸಾಗಾಟ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪೂರ್ವಾನುಮತಿ ಕಡ್ಡಾಯ. ಆದರೆ, ಅಂಬ್ಲಮೊಗರು ರಸ್ತೆ ಬದಿಯಲ್ಲಿದ್ದ ಸುಮಾರು 50ರಿಂದ 60 ಅಡಿ ಎತ್ತರದ ಬೃಹತ್ ಗುಡ್ಡವನ್ನು ಎರಡು ಕಡೆಗಳಲ್ಲಿ ನಿಯಮಬಾಹಿರವಾಗಿ ಅಗೆದು ರಸ್ತೆ ಮಟ್ಟಕ್ಕೆ ಸಮತಟ್ಟು ಮಾಡಲಾಗಿದೆ. ಗುಡ್ಡದ ಒಂದು ಭಾಗವನ್ನು ಸಂಪೂರ್ಣ ಖಾಲಿ ಮಾಡಿರುವುದರಿಂದ, ಅದರ ಮೇಲ್ಭಾಗದಲ್ಲೇ ಇರುವ ಸಾರ್ವಜನಿಕ ನೀರಿನ ಟ್ಯಾಂಕ್‌ನ ಅಡಿಪಾಯ ದುರ್ಬಲಗೊಂಡಿದೆ. ಪ್ರಸಕ್ತ ಮುಂಗಾರು ಮಳೆ ತೀವ್ರಗೊಂಡರೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದು ಟ್ಯಾಂಕ್ ಧರಾಶಾಹಿಯಾಗುವ ಭೀತಿ ಎದುರಾಗಿದೆ.
ದುರಂತಗಳಿಂದಲೂ ಕಲಿಯದ ಪಾಠ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಸಂಭವಿಸುತ್ತಿರುವ ಗುಡ್ಡ ಕುಸಿತದ ದುರಂತಗಳು ಕಣ್ಣಮುಂದಿದ್ದರೂ ಅಧಿಕಾರಿಗಳು ಹಾಗೂ ಮಣ್ಣು ಮಾಫಿಯಾ ಪಾಠ ಕಲಿತಂತಿಲ್ಲ. ಕಳೆದ ಮೇ ತಿಂಗಳಿನಲ್ಲಿ ಉಳ್ಳಾಲ ತಾಲೂಕಿನ ಮಂಜನಾಡಿ ಮತ್ತು ಬೆಳ್ಮ ಗ್ರಾಮಗಳಲ್ಲಿ ಸಂಭವಿಸಿದ ಗುಡ್ಡ ಕುಸಿತಕ್ಕೆ ಇಬ್ಬರು ಕಂದಮ್ಮಗಳು ಸೇರಿದಂತೆ ನಾಲ್ವರು ಬಲಿಯಾಗಿದ್ದರು. ಇಬ್ಬರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದರು. ಹಿಂದಿನ ವರ್ಷ ಮುನ್ನೂರು ಗ್ರಾಮದ ಮದನಿನಗರದಲ್ಲಿ ತಡೆಗೋಡೆ ಕುಸಿದು ದಂಪತಿ ಸೇರಿ ಇಬ್ಬರು ಹೆಣ್ಣುಮಕ್ಕಳು ಪ್ರಾಣ ಕಳೆದುಕೊಂಡಿದ್ದರು. ಇಷ್ಟೆಲ್ಲಾ ಜೀವಹಾನಿ ಸಂಭವಿಸಿದರೂ ಕೇವಲ ಎಚ್ಚರಿಕೆ ನೋಟಿಸ್‌ಗಳಿಗೆ ಸೀಮಿತವಾಗಿರುವ ಇಲಾಖೆಗಳು, ಕಠಿಣ ಕಾನೂನು ಕ್ರಮ ಕೈಗೊಳ್ಳದಿರುವುದೇ ಇಂತಹ ಸ್ವಯಂಕೃತ ಅಪರಾಧಗಳು ಮುಂದುವರಿಯಲು ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣಿ ಇಲಾಖೆಯಲ್ಲಿಲ್ಲ ಮಾಹಿತಿ
ಗುಡ್ಡ ಅಗೆದು ಮಣ್ಣು ಸಾಗಾಟ ಮಾಡಿರುವುದರಿಂದ ಟ್ಯಾಂಕ್ ಅಪಾಯಕ್ಕೆ ಸಿಲುಕಿರುವ ಬಗ್ಗೆ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಹಸೀಲ್ದಾರ್ ಇಲಾಖೆಗೆ ದೂರು ನೀಡಲಾಗಿದೆ. ಗಣಿ ಇಲಾಖೆಯವರು ಭೇಟಿ ನೀಡಿದ್ದಾರೆ. ಮಣ್ಣು ಅಗೆದ ಜಾಗ ಖಾಸಗಿ, ತಾಗಿಕೊಂಡಿರುವ ಟ್ಯಾಂಕ್ ಇರುವ ಜಾಗ ಸರ್ಕಾರಿ ಎಂದು ಅಂಬ್ಲಮೊಗರು ಪಿಡಿಒ ಅಬ್ದುಲ್ ಖಾದರ್ ತಿಳಿಸಿದ್ದಾರೆ. ಗಣಿ ಇಲಾಖೆಗೆ ಸಂದೀಪ್ ವಾರದ ಹಿಂದಷ್ಟೇ ಉಪನಿರ್ದೇಶಕರಾಗಿ ಬಂದಿದ್ದು ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲ.
ಮಣ್ಣು ತೆಗೆಯಲು ಗಣಿ ಇಲಾಖೆಯ ಅನುಮತಿ ಅಗತ್ಯ. ಆದರೆ ಗುಡ್ಡ ಅಗೆಯುವ ಸಂದರ್ಭದಲ್ಲಿ ನಮ್ಮ ಗಮನಕ್ಕೆ ತಂದಿಲ್ಲ. ಇದರಿಂದ ನೀರಿನ ಟ್ಯಾಂಕ್‌ಗೆ ನೇರ ಅಪಾಯ ಎದುರಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಲಾಗಿದೆ.
ಮಣ್ಣು ತೆಗೆಯಲು ಇಲಾಖೆಯ ಅನುಮತಿ ಕಡ್ಡಾಯ. ಅಂಬ್ಲಮೊಗರುವಿನಲ್ಲಿ ನಿಯಮಬಾಹಿರವಾಗಿ ಗುಡ್ಡ ಅಗೆದಿರುವ ಬಗ್ಗೆ ಮಾಹಿತಿ ಪಡೆದು, ಈಗಾಗಲೇ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.