ಉಪ್ಪಿನಂಗಡಿಯಲ್ಲಿ ಮೈದುಂಬಿ ಹರಿಯುತ್ತಿರುವ ಕುಮಾರಾಧಾರಾ ಹಾಗೂ ನೇತ್ರಾವತಿ ನದಿ.  
ಉಡುಪಿ

ಉಭಯ ನದಿಗಳ ನೀರಿನ ಮಟ್ಟ ಏರಿಕೆ

ಉಪ್ಪಿನಂಗಡಿ:

ಸತತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದ್ದು, ಶನಿವಾರ ರಾತ್ರಿ 7.30ರ ವೇಳೆಗೆ ಉಭಯ ನದಿಗಳು ಅಪಾಯಮಟ್ಟದ ಸಮೀಪದಲ್ಲಿ ಹರಿಯುತ್ತಿದ್ದವು.

ಶನಿವಾರ ಮುಂಜಾನೆಯಿಂದಲೇ ನದಿಗಳ ನೀರಿನ ಮಟ್ಟದಲ್ಲಿ ಸತತ ಏರಿಕೆ ಕಂಡುಬಂದಿದ್ದು ಪಶ್ಚಿಮಘಟ್ಟ ತಪ್ಪಲಿನಲ್ಲಿ ಮಳೆ ಬಿರುಸುಗೊಂಡಿದ್ದರಿಂದ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಯಿತು. ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟವಾದ ಸಮುದ್ರಮಟ್ಟಕ್ಕಿಂತ 30.5 ಮೀ. ಸನಿಹದಲ್ಲಿ ನದಿ ನೀರಿನ ಹರಿವು ಇದ್ದು, ನಿರಂತರ ಮಳೆಯಾದರೆ ನದಿಗಳು ಉಕ್ಕಿ ಹರಿಯುವ ಭೀತಿ ಎದುರಾಗಿದೆ.

ಉಪ್ಪಿನಂಗಡಿ ಸುಬ್ರಹ್ಮಣ್ಯ ಕ್ರಾಸ್ ಬಳಿಯ ತಗ್ಗು ಪ್ರದೇಶಗಳಿಗೆ ನೇತ್ರಾವತಿ ನದಿ ನೆರೆ ನೀರು ನುಗ್ಗಿದ್ದು, ಪರಿಸರದ 6 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಪ್ರವಾಹ ಸಾಧ್ಯತೆ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್, ತಹಸೀಲ್ದಾರ್, ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಲ್ಲಿ ಸಮಾಲೋಚನೆ ನಡೆಸಿದರು.