ಬೈಂದೂರು ತಾಪಂ ಸಭಾಂಗಣದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ಬೈಂದೂರು ತಾಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಪ್ರಮುಖರಾದ ರವಿರಾಜ್ ದೀಕ್ಷಿತ್, ಶೇಷಶಯನ, ಶೇಖರ ಪೂಜಾರಿ, ನರಸಿಂಹ ಹಳಗೇರಿ, ಜಗದೀಶ ದೇವಾಡಿಗ, ಸತೀಶ ಶೆಟ್ಟಿ, ಮೋಹನ್ ಪೂಜಾರಿ ಉಪಸ್ಥಿತರಿದ್ದರು. 
ಉಡುಪಿ

ನೀರಿನ ಮಟ್ಟ ಇಳಿಕೆ ಸಾಧ್ಯತೆ

ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿ ಅವಧಿಗೂ ಮುನ್ನ ನೀರಿನ ಮಟ್ಟ ಕಡಿಮೆಯಾಗುವ ಸಾಧ್ಯತೆ.

ವಿಜಯವಾಣಿ ಸುದ್ದಿಜಾಲ ಬೈಂದೂರು

ಈ ಬಾರಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿ ಅವಧಿಗೂ ಮುನ್ನ ನೀರಿನ ಮಟ್ಟ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಶೀಘ್ರ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಣೆ ಕಾರ್ಯ ಮಾಡಬೇಕು. ಬೈಂದೂರು ತಾಲೂಕು ವ್ಯಾಪ್ತಿಯ ಎಲ್ಲ ಕಿಂಡಿ ಅಣೆಕಟ್ಟುಗಳ ಹಲಗೆ ಜೋಡಿಸುವ ಕಾರ್ಯ ಇನ್ನೂ ವಿಳಂಬವಾದರೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಲಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಬೈಂದೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಬೈಂದೂರು ತಾಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೈಂದೂರು ತಾಲೂಕು ಆಡಳಿತ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದ್ದು, ಜನಸಾಮಾನ್ಯರ ಕೆಲಸವಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ ಎಂಬ ಆರೋಪ ಕೇಳಿಬಂತು. ಇದಕ್ಕೆ ಧ್ವನಿಗೂಡಿಸಿದ ಕೆಡಿಪಿ ಸದಸ್ಯ ಶೇಖರ ಪೂಜಾರಿ, ತಾಲೂಕು ಆಡಳಿತ ಕೇಂದ್ರದಲ್ಲಿ ಜನಸಾಮಾನ್ಯರು ತಿಂಗಳುಗಟ್ಟಲೇ ಅಲೆದಾಡಿದರೂ ಕೆಲಸವಾಗುತ್ತಿಲ್ಲ. ಇಲ್ಲಿ ಮಧ್ಯವರ್ತಿಗಳು ಹಾಗೂ ಪ್ರಭಾವಿಗಳ ಕೆಲಸಗಳು ಮಾತ್ರ ಆಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ತಾಲೂಕು ವ್ಯಾಪ್ತಿಯಲ್ಲಿ ಆಂಬುಲೆನ್ಸ್‌ಗಳು ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆಯಲ್ಲಿ ಅನಾರೋಗ್ಯ ಪೀಡಿತರು ಸಂಕಷ್ಟ ಎದುರಿಸುತ್ತಿರುವ ದೂರು ಕೇಳಿಬರುತ್ತಿದೆ ಎಂದ ಶಾಸಕರು, ಹವಾಮಾನ ವೈಪರೀತ್ಯದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ತಹಸೀಲ್ದಾರ್ ರವಿರಾಜ್ ದೀಕ್ಷಿತ್, ತಾಪಂ ಕಾರ್ಯನಿರ್ವಹಣಾಧಿಕಾರಿ ಶೇಷಶಯನ, ಕೆಡಿಪಿ ಸದಸ್ಯರಾದ ಶೇಖರ ಪೂಜಾರಿ, ನರಸಿಂಹ ಹಳಗೇರಿ, ಜಗದೀಶ ದೇವಾಡಿಗ, ಸತೀಶ ಶೆಟ್ಟಿ, ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ತಾಪಂ ಸಿಬ್ಬಂದಿ ರೂಪಾ ಕಾರ್ಯಕ್ರಮ ನಿರ್ವಹಿಸಿದರು.

ಅನುದಾನ ದುರುಪಯೋಗ

ತಾಲೂಕಿನ ಸಾಲಿಮಕ್ಕಿ ಹಾಗೂ ನದಿಕಂಠ ಅಂಗನವಾಡಿ ಕೇಂದ್ರಕ್ಕೆ ನರೇಗಾ ಯೋಜನೆಯಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಅದನ್ನು ಅನ್ಯ ಕಾಮಗಾರಿಗಳಿಗೆ ಬಳಸಿಕೊಂಡಿರುವ ದೂರು ಕೇಳಿಬರುತ್ತಿದೆ ಎಂಬ ಆರೋಪ ವ್ಯಕ್ತವಾಯಿತು. ಈ ಬಗ್ಗೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಶೀಘ್ರ ಸಂಬಂಧಿತ ಪಿಡಿಒಗಳ ಸಭೆ ಕರೆದು ವರದಿ ನೀಡಿಬೇಕು ಎಂದು ಶಾಸಕರು ಸೂಚನೆ ನೀಡಿದರು.

ರೈತರ ಸಂಕಷ್ಟಕ್ಕೆ ಸ್ಪಂದಿಸಿ

ತೆಂಗು ಬೆಳೆಗೆ ರೋಗ ಭೀತಿ ವರದಿ ಬಗ್ಗೆ ಪ್ರಸ್ತಾಪಿಸಿದ ಶಾಸಕರು, ಮಳೆ ಕೊರತೆಯಿಂದಾಗಿ ನಾಡಾ ಗ್ರಾಪಂ ವ್ಯಾಪ್ತಿಯ ಹಡವು, ಅತ್ತಿಕೋಣೆ ಭಾಗದಲ್ಲಿ ತೆಂಗುಬೆಳೆ ರೋಗ ಬಾಧೆಗೆ ತುತ್ತಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವಾಗಬೇಕು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೀದಿನಾಯಿಗಳ ಹಾವಳಿ ತಪ್ಪಿಸಿ

ಬೈಂದೂರು ಪಟ್ಟಣ ಪಂಚಾಯಿತಿ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿಯಿಂದಾಗಿ ಜನರು ಹೈರಾಣಾಗಿದ್ದಾರೆ. ಅದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ಖಾಸಗಿ ಸಂಘ-ಸಂಸ್ಥೆಗಳು ನಡೆಸುತ್ತಿರುವ ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಸಹಕರಿಸುವಂತೆ ಸೂಚಿಸಿದರು.