ಗರ್ಡಾಡಿ ಫಲ್ಗುಣಿ ನದಿಯಲ್ಲಿ ಕಂಡುಬಂದಿರುವ ನೀರುನಾಯಿಗಳು.
ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಕುಬಳಬೆಟ್ಟು ಗುತ್ತು ಪರಿಸರದ ಫಲ್ಗುಣಿ ನದಿ ತಟದ ಹಳ್ಳದಲ್ಲಿ ಕೆಲವು ದಿನಗಳಿಂದ ನೀರುನಾಯಿಗಳು ಕಂಡು ಬರುತ್ತಿವೆ.
ಇಲ್ಲಿನ ಕೆ.ಸಂಪತ್ ಕುಮಾರ್ ಕೊಂಬ ಎಂಬುವರ ಮನೆ ಸಮೀಪ ಕೃಷಿ ತೋಟದಲ್ಲಿ ಹರಿಯುವ ಹಳ್ಳದಲ್ಲಿ ಆಗಾಗ ನೀರುನಾಯಿಗಳು ಕಂಡು ಬರುತ್ತಿವೆ. ಈ ಹಿಂದಿನ ವರ್ಷಗಳಲ್ಲೂ ಈ ಸ್ಥಳದಲ್ಲಿ ಕಂಡುಬಂದಿದ್ದವು. ಸಮೀಪದಲ್ಲಿ ಹರಿಯುವ ಫಲ್ಗುಣಿ ನದಿ ಸೇರುವ ಹಳ್ಳದಲ್ಲಿ ಹತ್ತಕ್ಕಿಂತ ಹೆಚ್ಚು ನೀರುನಾಯಿ ಮರಿಗಳು ಆಗಾಗ ಆಟ ಆಡುತ್ತಿರುತ್ತವೆ. ದೊಡ್ಡ ನೀರುನಾಯಿಗಳು ಹಳ್ಳದಲ್ಲಿ ಬರುವುದು ತೀರಾ ಅಪರೂಪ.
ಫಲ್ಗುಣಿ ನದಿ ತಟದಲ್ಲಿ 25ಕ್ಕಿಂತ ಅಧಿಕ ನೀರುನಾಯಿಗಳು ಇರುವ ಶಂಕೆಯಿದೆ. ಜನರು ನದಿಯತ್ತ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ಮಳೆ ಪ್ರಮಾಣ ತೀವ್ರ ಕಡಿಮೆಯಾಗಿ ನೀರಿನ ಹರಿವು ಕಡಿಮೆ ಇರುವುದರಿಂದ ನೀರುನಾಯಿಗಳು ಆಹಾರ ಅರಸಿಕೊಂಡು ಹಳ್ಳದತ್ತ ಬರುತ್ತಿವೆ ಎನ್ನಲಾಗಿದೆ.