ಬಹುಮಹಡಿ ಕಟ್ಟಡದಿಂದ ಹೆದ್ದಾರಿಗೆ ತ್ಯಾಜ್ಯ ನೀರು ಹರಿಯುತ್ತಿರುವುದು. 
ಉಡುಪಿ

ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ಹೆದ್ದಾರಿಗೆ

ಹಳೆಯಂಗಡಿ: ಹಳೆಯಂಗಡಿ ಬಸ್ ನಿಲ್ದಾಣದ ಬಳಿಯಿರುವ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ತೆರೆದ ಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹರಿಯುತ್ತಿದ್ದು ಗ್ರಾಮಸ್ಥರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಹುಮಹಡಿ ಕಟ್ಟಡದ ಮಾಲೀಕರು ಕಳೆದ ಕೆಲವು ತಿಂಗಳಿನಿಂದ ಕಟ್ಟಡದ ತ್ಯಾಜ್ಯ ನೀರನ್ನು ಸರಿಯಾಗಿ ವಿಲೇವಾರಿ ಮಾಡದೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬಿಡುತ್ತಿದ್ದಾರೆ. ಇದರಿಂದ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿರುವ ಪ್ರಯಾಣಿಕರಿಗೆ ಶಾಲಾ ವಿದ್ಯಾರ್ಥಿಗಳಿಗೆ, ತೊಂದರೆಯಾಗಿದ್ದು ಪರಿಸರದಲ್ಲಿ ರೋಗದ ಭೀತಿ ಎದುರಾಗಿದೆ.
ಈ ಬಗ್ಗೆ ಅನೇಕ ಬಾರಿ ಹಳೆಯಂಗಡಿ ಪಂಚಾಯಿತಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಹೆದ್ದಾರಿ ಬದಿಯಲ್ಲಿ ಬ್ಯಾನರ್ ಅಳವಡಿಸಿ ಪ್ರತಿಭಟನೆ ನಡೆಸುವ ಸೂಚನೆ ನೀಡಿದ್ದಾರೆ. ಎರಡು ದಿನಗಳ ಹಿಂದೆ ಬ್ಯಾನರ್ ಅಳವಡಿಸಿದ್ದು, ದುಷ್ಕರ್ಮಿಗಳು ಅದನ್ನು ಹರಿದು ಹಾಕಿದ್ದಾರೆ ಎನ್ನಲಾಗಿದೆ.
ಕೂಡಲೇ ಜನಪ್ರತಿನಿಧಿಗಳು, ಮೂಲ್ಕಿ ತಹಸೀಲ್ದಾರ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತೆರೆದ ಸ್ಥಳದಲ್ಲಿ ತ್ಯಾಜ್ಯ ನೀರು ಹರಿಯಲು ಬಿಡುವ ಕಟ್ಟಡದ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ಸಂಗ್ರಹಕ್ಕಾಗಿ ಪಿಟ್ ಇಲ್ಲದೆ ಎಲ್ಲೆಂದರಲ್ಲಿ ಹರಿಯುತ್ತಿದೆ. ತಿಂಗಳ ಹಿಂದೆ ನಮ್ಮ ಕಟ್ಟಡದ ಬದಿಯಲ್ಲಿ ತ್ಯಾಜ್ಯ ಹರಿಯುತ್ತಿದ್ದರಿಂದ ಸ್ಥಳೀಯ ಬಾವಿಗಳ ನೀರು ಕೂಡ ಮಲಿನಗೊಂಡಿದೆ. ಇದರಿಂದ ಸ್ಥಳೀಯ ನಾಗರಿಕರು ಒಟ್ಟಾಗಿ ತೆರೆದ ಸ್ಥಿತಿಯಲ್ಲಿ ಹರಿಯುತ್ತಿದ್ದ ತ್ಯಾಜ್ಯನೀರಿನ ಚರಂಡಿಗೆ ಮಣ್ಣು ಹಾಕಿ ಮುಚ್ಚಿದ್ದು ಈಗ ಹೆದ್ದಾರಿ ಬದಿ ಹರಿಯುತ್ತಿದೆ. ಇದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ, ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದ್ದು ರೋಗದ ಭೀತಿ ಎದುರಾಗಿದೆ.