ಕಂಚುಗಾರ ಪೇಟೆಯ ನೇತ್ರಾವತಿ ನದಿ ತೀರದಲ್ಲಿ ತ್ಯಾಜ್ಯ ಕೊಳೆತು ರಾಡಿಯಾಗಿರುವುದು.
ಬಂಟ್ವಾಳ: ಪುರಸಭೆ ಮನೆ-ಮನೆಯಿಂದ ಸಂಗ್ರಹಿಸಿ ರಾಶಿ ಹಾಕಿರುವ ತ್ಯಾಜ್ಯಗಳ ಕೊಳಚೆ ನೀರು ನೇರವಾಗಿ ನೇತ್ರಾವತಿ ನದಿಗೆ ಹರಿಯುವ ಕಳವಳಕಾರಿ ಅಂಶವೊಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ನಿಕಟಪೂರ್ವ ಹಿರಿಯ ಸದಸ್ಯ ಎ.ಗೋವಿಂದಪ್ರಭು ಬಂಟ್ವಾಳ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮುಖ್ಯಾಧಿಕಾರಿ ಹಾಗೂ ಪ್ರಭಾರ ಪರಿಸರ ಅಭಿಯಂತ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ನೇತ್ರಾವತಿ ನದಿ ಸಮೀಪದ ಕಂಚುಗಾರಪೇಟೆ ಎಂಬಲ್ಲಿ ಪುರಸಭೆಯು ಅನಧಿಕೃತವಾಗಿ ತ್ಯಾಜ್ಯ ವಿಂಗಡಣಾ ಸ್ಥಳವನ್ನಾಗಿಸಿದೆ. ಪ್ರತಿ ದಿನ ಮನೆ-ಮನೆಯಿಂದ ಸಂಗ್ರಹಿಸಲಾಗುವ ಕಸ ಮತ್ತು ತ್ಯಾಜ್ಯವನ್ನು ಕಂಚುಗಾರಪೇಟೆಯಲ್ಲಿ ರಾಶಿ ಹಾಕಲಾಗುತ್ತಿದೆ. ಇದರ ಪಕ್ಕದಲ್ಲೇ ನೇತ್ರಾವತಿ ನದಿ ನೀರು ಹರಿಯುತ್ತಿದ್ದು, ಈ ಅನಧಿಕೃತ ಡಂಪಿಂಗ್ ಯಾರ್ಡ್‌ನಲ್ಲಿ ರಾಶಿ ಹಾಕಲಾಗುವ ತ್ಯಾಜ್ಯದ ಕೊಳಚೆ ನೀರು ನೇರವಾಗಿ ನೇತ್ರಾವತಿ ನದಿಯನ್ನು ಸೇರುತ್ತಿದೆ ಎಂದು ಪುರಸಭೆಯ ನಿಕಟಪೂರ್ವ ಸದಸ್ಯ ಎ.ಗೋವಿಂದಪ್ರಭು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಚಾರ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಪ್ರಭಾರ ಪರಿಸರ ಅಭಿಯಂತರ ಗಮನಕ್ಕೂ ಬಂದಿದ್ದರೂ, ಜವಾಬ್ದಾರಿಯುತರಾದ ಇವರು ಯಾವುದೇ ಕ್ರಮ ಕೈಗೊಂಡಿಲ್ಲ. ನೇತ್ರಾವತಿ ನೀರನ್ನು ಬಂಟ್ವಾಳ ಮಾತ್ರವಲ್ಲದೆ ಮಂಗಳೂರು ನಗರದ ಜನತೆಯೂ ಬಳಸುವುದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದುರ್ವಾಸನೆ ಬೀರುವ ಸ್ಥಳ
ಸಜೀಪನಡುಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಪುರಸಭೆಯೇ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ ಘಟಕವಿದೆ. ಮನೆ, ಮನೆ ಸಂಗ್ರಹಿಸಲಾಗುವ ಕಸ, ತ್ಯಾಜ್ಯವನ್ನು ನೇರವಾಗಿ ಕಂಚಿನಡ್ಕಪದವಿಗೆ ಸಾಗಿಸುವ ಬದಲು ಕಂಚುಗಾರಪೇಟೆಯ ನೇತ್ರಾವತಿ ನದಿತೀರದಲ್ಲೇ ಡಂಪಿಂಗ್ ಯಾರ್ಡ್‌ನ್ನಾಗಿಸಿ ತ್ಯಾಜ್ಯದ ವಿಂಗಡಣಾ ಕಾರ್ಯ ನಡೆಸಲಾಗುತ್ತಿದೆ. ಪರಿಣಾಮ ಈ ರಸ್ತೆಯಿಡಿ ದುರ್ವಾಸನೆ ಬೀರುತ್ತಿದೆಯಲ್ಲದೆ, ತ್ಯಾಜ್ಯದ ಕೊಳಚೆ ನೀರು ನೇರವಾಗಿ ನೇತ್ರಾವತಿ ನದಿಗೆ ಸೇರುತ್ತದೆ. ಪರಿಸರ ಮಾಲಿನ್ಯದ ಜತೆಗೆ ಸಾರ್ವಜನಿಕ ಆರೋಗ್ಯಕ್ಕೂ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.