ವಿಜಯವಾಣಿ ಸುದ್ದಿಜಾಲ ಕುಂದಾಪುರ
ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರ್ಚ್ ರೋಡ್ ಪ್ರದೇಶದಲ್ಲಿರುವ ಮಲ್ಯರಬೆಟ್ಟು ಅಂಗನವಾಡಿ ಕೇಂದ್ರದ ವಠಾರದಲ್ಲಿ ರಾತ್ರೋರಾತ್ರಿ ತ್ಯಾಜ್ಯಗಳನ್ನು ಸುರಿಯಲಾಗಿದ್ದು, ಮಕ್ಕಳ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಗಂಗೊಳ್ಳಿ ಚರ್ಚ್ ಸಮೀಪ ಮುಚ್ಚಲ್ಪಟ್ಟಿರುವ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿರುವ ಮಲ್ಯರಬೆಟ್ಟು ಅಂಗನವಾಡಿ ಕೇಂದ್ರದ ವಠಾರದಲ್ಲಿ ಅಂಗನವಾಡಿ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ತ್ಯಾಜ್ಯಗಳನ್ನು ರಾಶಿ ಹಾಕಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಅಂಗನವಾಡಿ ಕೇಂದ್ರದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿರುವುದರಿಂದ ಅಂಗನವಾಡಿ ಪುಟಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದು, ತ್ಯಾಜ್ಯ ಹಾಕಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.
ಚರ್ಚ್ ಅಧೀನದಲ್ಲಿದೆ ಎನ್ನಲಾದ ಈ ಶಾಲಾ ವಠಾರದಲ್ಲಿರುವ ಅಂಗನವಾಡಿ ಕೇಂದ್ರವನ್ನು ತೆರವುಗೊಳಿಸುವಂತೆ ಕಳೆದ 2 ವರ್ಷಗಳಿಂದ ಒತ್ತಡ ಹೇರಲಾಗುತ್ತಿದ್ದು, ಇದೇ ಕಾರಣದಿಂದ ಅಂಗನವಾಡಿ ಪ್ರದೇಶದಲ್ಲಿ ಗಿಡಗಂಟಿಗಳ ತ್ಯಾಜ್ಯ ಹಾಕಿರುವ ಶಂಕೆ ವ್ಯಕ್ತವಾಗಿದೆ. ಕೆಲ ವರ್ಷಗಳ ಹಿಂದೆ ಅಂಗನವಾಡಿ ಕೇಂದ್ರದ ಕಿಟಕಿ ಗಾಜುಗಳನ್ನು ಪುಡಿ ಮಾಡಿದ ಘಟನೆ ಕೂಡ ನಡೆದಿದ್ದು, ಇದೀಗ ಅಂಗನವಾಡಿ ಕೇಂದ್ರದ ವಠಾರದಲ್ಲಿ ತ್ಯಾಜ್ಯ ತಂದು ಹಾಕಿರುವುದು ಪಾಲಕರನ್ನು ಕೆರಳಿಸಿದೆ.
ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿರುವ ಮಲ್ಯರಬೆಟ್ಟು ಅಂಗನವಾಡಿ ಕೇಂದ್ರದ ವಠಾರದಲ್ಲಿ ಅಂಗನವಾಡಿ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ತ್ಯಾಜ್ಯಗಳನ್ನು ರಾಶಿ ಹಾಕಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದೆ. ಆದ್ದರಿಂದ ತ್ಯಾಜ್ಯ ಎಸೆದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು.ಕೃಷ್ಣ ಖಾರ್ವಿ ಸ್ಥಳೀಯರು, ಗಂಗೊಳ್ಳಿ