ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ 'ಸ್ಟಾಪ್ ವೋಟ್ ಚೋರಿ' ಅಭಿಯಾನದಲ್ಲಿ ನಿಕೇತ್ರಾಜ್ ಮೌರ್ಯ ಮಾತನಾಡಿದರು. ವಿನಯಕುಮಾರ್ ಸೊರಕೆ, ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಅಶೋಕ್ಕುಮಾರ್ ಕೊಡವೂರು, ಎಂ.ಎ. ಗೂರ್, ಪ್ರಸಾದ್ರಾಜ್ ಕಾಂಚನ್ ಇತರರಿದ್ದರು.
*ನಿಕೇತ್ರಾಜ್ ಮೌರ್ಯ ಅಭಿಪ್ರಾಯ
* 'ಸ್ಟಾಪ್ ವೋಟ್ ಚೋರಿ' ಅಭಿಯಾನ
* ಕಾಂಗ್ರೆಸ್ನಿಂದ ಮಾನವ ಸರಪಳಿ
ಉಡುಪಿ: ಕೇಂದ್ರ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೇ ಸಂವಿಧಾನವನ್ನೇ ಬದಲಾಯಿಸಲು ಪ್ರಯತ್ನಿಸುತ್ತಿದೆ. ಅದಲ್ಲದೆ, ಅಧಿಕಾರಕ್ಕಾಗಿ ಈಗ ಮತಗಳ್ಳತನದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಧ್ವಂಸ ಮಾಡತೊಡಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಹಾಗೂ ಬೆಳೆಯಲು ನ್ಯಾಯಯುತವಾಗಿ ಚುನಾವಣೆ ನಡೆಯಬೇಕು. ಚುನಾವಣಾ ಆಯೋಗದ ಮೂಲಕವೇ ಜನರ ಮತ (ವೋಟ್) ಕಳ್ಳತನ ಮಾಡಿದ ಅವರಿಗೆ ಮತಗಳ ಮೂಲಕವೇ ಮುಂದಿನ ಚುನಾವಣೆಯಲ್ಲಿ ಜನತೆ ಸೋಲಿನ ಶಿಕ್ಷೆ ನೀಡಬೇಕು ಎಂದು ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ರಾಜ್ ಮೌರ್ಯ ಕರೆ ನೀಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಉಡುಪಿಯ ಸಿಟಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಶನಿವಾರ (ಡಿ.20) ಆಯೋಜಿಸಿದ್ದ 'ಸ್ಟಾಪ್ ವೋಟ್ ಚೋರಿ' ಅಭಿಯಾನದ ನಿಮಿತ್ತ ಬಿಜೆಪಿ ವಿರುದ್ಧ ಜನಜಾಗೃತಿಗಾಗಿ ಮಣಿಪಾಲ ಸಿಂಡಿಕೇಟ್ ವೃತ್ತದ ತನಕ ನಡೆದ ಮಾನವ ಸರಪಳಿ ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಮನ ಹೆಸರಲ್ಲಿ ರಾಜಕಾರಣ
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಸಂವಿಧಾನ ದುರ್ಬಲಗೊಳಿಸುತ್ತ, ಮತಗಳ್ಳತನದ ಮೂಲಕ ಪ್ರಜಾಪ್ರಭುತ್ವದ ಬುನಾದಿಗೆ ಕೊಡಲಿ ಪೆಟ್ಟು ಹಾಕಿದೆ. ವಿಶ್ವದ 186 ರಾಷ್ಟ್ರದಲ್ಲಿ ಇಂದಿಗೂ ಕುರುಹು ಹೊಂದಿರುವ ನಮ್ಮ ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹೆಸರನ್ನು ಸಂಸತ್ ಮೂಲಕವೇ ಸಂಪೂರ್ಣವಾಗಿ ಅಳಿಸಿ ಹಾಕುವ ಹುನ್ನಾರ ನಡೆಸಿದ್ದಾರೆ. ರಾಮನ ಹೆಸರಲ್ಲಿ ರಾಜಕಾರಣ ಮಾಡುತ್ತ ತಮ್ಮ ಅಕ್ರಮಗಳನ್ನೆಲ್ಲ ಮರೆಮಾಚುತ್ತಿದ್ದಾರೆ. ಚುನಾವಣಾ ಇ.ಡಿ., ಸಿಬಿಐಗಳೆಲ್ಲವೂ ಅವರ ಕೈಗೊಂಬೆಯಾಗಿವೆ ಎಂದು ಆರೋಪಿಸಿದರು.
ವಿಪ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿದರು. ಸಹಬಾಳ್ವೆ ಸಂಚಾಲಕ ಪ್ರೊ.ಣಿರಾಜ್, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಸೋನಿಯಾ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ಕೆಪಿಸಿಸಿ ಸದಸ್ಯೆ ವೆರೋನಿಕಾ ಕರ್ನೇಲಿಯೊ, ರಾಜು ಪೂಜಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಸಾದ್ರಾಜ್ ಕಾಂಚನ್, ಅಭಿಯಾನದ ಸಂಚಾಲಕ ಹರಿಪ್ರಸಾದ್ ರೈ, ರಮೇಶ್ ಕಾಂಚನ್, ರೋಶನಿ ಒಲಿವೆರಾ, ಅಮೃತಾ ಕೃಷ್ಣಮೂರ್ತಿ, ಭಾಸ್ಕರ್ ರಾವ್ ಕಿದಿಯೂರು, ದಿನೇಶ್ ಹೆಗ್ಡೆ ಮೊಳವಳ್ಳಿ ಇತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ನಾಗೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಬಿಜೆಪಿಗರ 'ವೋಟ್ ಚೋರಿ'ಯನ್ನು ಬಯಲಿಗೆಳೆದಿದ್ದಾರೆ. ದೇಶದ ಜನತೆಗೆ ಈ ಅಕ್ರಮ ತಿಳಿಸಲು 'ಸ್ಟಾಪ್ ವೋಟ್ ಚೋರಿ' ಅಭಿಯಾನ ನಡೆಸಲಾಗುತ್ತಿದೆ. ಜನರ ಮತದಾನದ ಹಕ್ಕನ್ನು ದುರುಪಯೋಗ ಮಾಡಿಕೊಂಡಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿರುವ ವಿರುದ್ಧ ದೇಶಾದ್ಯಂತ ಹೋರಾಟ ನಡೆಯಬೇಕು. ಸಂವಿಧಾನ ರಕ್ಷಣೆಯ ಪರ ಇರುವವರೆಲ್ಲರೂ ಈ ಅಭಿಯಾನಕ್ಕೆ ಕೈಜೋಡಿಸಬೇಕು.