ಉಡುಪಿ ತೆಂಕಪೇಟೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಹಣತೆ ದೀಪಗಳ ಜ್ಯೋತಿಯಲ್ಲಿ ಗೀತೋಪದೇಶದ ಶ್ರೀಕೃಷ್ಣನ ವಿಶ್ವರೂಪ ದರ್ಶನ ನಡೆಯಿತು. 
ಉಡುಪಿ

ಹಣತೆ ದೀಪಗಳ ಜ್ಯೋತಿಯಲ್ಲಿ ವಿಶ್ವರೂಪ ದರ್ಶನ

* ಉಡುಪಿಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ದೀಪೋತ್ಸವ

ಉಡುಪಿ: ತೆಂಕಪೇಟೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ 5 ಗಂಟೆಗೆ ಸಾವಿರಾರು ಹಣತೆ ದೀಪಗಳ ಜ್ಯೋತಿಯಲ್ಲಿ ಶ್ರೀಕೃಷ್ಣನ ಗೀತೋಪದೇಶದೊಂದಿಗೆ ದೇವರ ವಿಶ್ವರೂಪ ದರ್ಶನ ನಡೆಯಿತು.

ಪಶ್ಚಿಮ ಜಾಗರ ಪೂಜೆಯ ನಿಮಿತ್ತ ನೂರಾರು ಭಕ್ತರು ಪಾಲ್ಗೊಂಡು ಸರತಿ ಸಾಲಿನಲ್ಲಿ ಶ್ರೀದೇವರ ವಿಶ್ವರೂಪ ದರ್ಶನ ಪಡೆದರು.

ರಂಗೋಲಿಯಲ್ಲಿ ಮೂಡಿಬಂದ ಹರಿವಿಠ್ಠಲ.

ಹೂ-ರಂಗೋಲಿಯಲ್ಲಿ ದೇವರ ಚಿತ್ತಾರ

ಉತ್ಥಾನ ದ್ವಾದಶೀ ತುಳಸಿ ಪೂಜೆಯ ಪರ್ವ ಕಾಲದಲ್ಲಿ ಶ್ರೀದೇವರ ಸನ್ನಿಧಿಯಲ್ಲಿ ವಿವಿಧ ಬಗೆಯ ಹೂಗಳಿಂದ ಹಾಗೂ ರಂಗೋಲಿಯಲ್ಲಿ ಮೂಡಿಬಂದ ಬಣ್ಣದ ಚಿತ್ತಾರ ರೂಪದಲ್ಲಿ ರಾಮಾಯಣ, ಜಯದುರ್ಗಾ ಪರಮೇಶ್ವರಿ, ವೆಂಕಟರಮಣ, ಶಂಖ, ಚಕ್ರ, ಶ್ರೀಲಕ್ಷ್ಮೀ, ಇಡುಗುಂಜಿ ಮಹಾಗಣಪತಿ, ಶ್ರೀರಾಮ, ಹರಿ ವಿಠ್ಠಲ, ಶ್ರೀನಿವಾಸ ದೇವರು, ಗೀತೋಪದೇಶ, ಶ್ರೀವಿಷ್ಣುವಿನ ಅವತಾರ ಹೀಗೆ ವಿವಿಧ ದೇವರ ಚಿತ್ತಾರ ಭಕ್ತರ ಮನ ಸೆಳೆಯಿತು.

ಪ್ರಧಾನ ಅರ್ಚಕ ದಯಾಘನ ಭಟ್​ ಮಹಾಪೂಜೆ ನೆರವೇರಿಸಿದರು. ದೇವಳದ ಧರ್ಮದರ್ಶಿ ಗುಜ್ಜಾಡಿ ಪ್ರಭಾಕರ ನಾಯಕ, ಸೇವಾದಾರ ಗೋಕುಲದಾಸ ಭಟ್​, ಆಡಳಿತ ಮಂಡಳಿಯ ಸದಸ್ಯರು, ಜಿಎಸ್​ಬಿ ಯುವಕ ಹಾಗೂ ಮಹಿಳಾ ಮಂಡಳಿಯ ಸದಸ್ಯರು, ಸ್ವಯಂ ಸೇವಕರು ಸಹಕರಿಸಿದರು.

ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು. ದೇವರ ಸನ್ನಿಧಿಯಲ್ಲಿ ಸುಪ್ರಭಾತ, ಭಜನಾ ಕಾರ್ಯಕ್ರಮ, ದೀಪಾರಾಧನೆ, ಕಾಕಡಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು.