ಉಡುಪಿ ಪುತ್ತಿಗೆ ಮೂಲ ಮಠಕ್ಕೆ ಭೇಟಿ ನೀಡಿದ ಅಲೋಕ್​ ಕುಮಾರ್​ ಅವರು ಸುಗುಣೇಂದ್ರ ಶ್ರೀಗಳಿಂದ ಗೀತಾ ಲೇಖನದ ದೀಕ್ಷೆ ಸ್ವೀಕರಿಸಿದರು. ಸುಶ್ರೀಂದ್ರ ಶ್ರೀ ಇದ್ದರು. 
ಉಡುಪಿ

ರಾಮ ಮಂದಿರದಿಂದಲೇ ನಿರ್ಮಿಸೋಣ ರಾಮ ರಾಜ್ಯ

* ವಿಎಚ್​ಪಿ ರಾಷ್ಟ್ರೀಯ ಅಧ್ಯಕ್ಷ ಅಲೋಕ್​ ಕುಮಾರ್​ ಕರೆ

* ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲ ಮಠದಲ್ಲಿ ಧರ್ಮಸಭೆ 

ಉಡುಪಿ: ಶ್ರೀರಾಮ ಮಂದಿರ ನಿರ್ಮಾಣವೇ ನಮ್ಮ ಕಾರ್ಯದ ಅಂತ್ಯವಲ್ಲ. ಈಗ ರಾಮ ಮಂದಿರದಿಂದಲೇ ರಾಮ ರಾಜ್ಯದತ್ತ ಸಾಗಬೇಕು. ಧರ್ಮ, ನ್ಯಾಯ, ಸಮಾನತೆ, ಕರುಣೆ ಮತ್ತು ಸರ್ವಜನ ಕಲ್ಯಾಣದ ತಳಹದಿಯ ಮೇಲೆ ಆದರ್ಶ ಸಮಾಜ ನಿರ್ಮಿಸುವ ಸಂಕಲ್ಪ ಸಾಕಾರಗೊಳಿಸಬೇಕು. ವಾಲ್ಮೀಕಿ ಮಹರ್ಷಿಯ ಆಶಯದಂತೆ ನಮ್ಮೆಲ್ಲರ ಹೃದಯವೇ ಶ್ರೀರಾಮನ ಮಂದಿರವಾಗಲಿ ಎಂದು ವಿಶ್ವ ಹಿಂದೂ ಪರಿಷತ್​ನ ರಾಷ್ಟ್ರೀಯ ಅಧ್ಯಕ್ಷ ಅಲೋಕ್​ ಕುಮಾರ್​ ಕರೆ ನೀಡಿದರು.
ಉಡುಪಿ ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲ ಮಠದಲ್ಲಿ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯಿತಿ ಸುಶ್ರೀಂದ್ರ ತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ಶುಕ್ರವಾರ (ಆ.7) ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಮಾತನಾಡಿದರು.

ಯುಗ ಯುಗಗಳಲ್ಲೂ ಜೀವಂತ

ಅಸಂಖ್ಯಾತ ರಾಮಭಕ್ತರ ಏಕತೆ, ದೃಢಸಂಕಲ್ಪ, ಹೋರಾಟ ಮತ್ತು ಬಲಿದಾನಗಳ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಇದು ಯಾವುದೇ ಬಲವಂತದಿಂದ ನಿರ್ಮಾಣಗೊಂಡ ಮಂದಿರವಲ್ಲ. ದೀರ್ಘಕಾಲದ ನ್ಯಾಯಯುತ ಹೋರಾಟ ಮತ್ತು ತ್ಯಾಗದ ಫಲವಾಗಿ ಸಾಕಾರಗೊಂಡಿದೆ. ಹೀಗಾಗಿ ಈ ಮಂದಿರವು ಯುಗ ಯುಗಾಂತರಗಳವರೆಗೆ ಜೀವಂತವಾಗಿ ಉಳಿಯಲಿದೆ. ಭಕ್ತಿಗೆ ಜಾತಿ, ವರ್ಗಗಳ ಭೇದವಿಲ್ಲ ಎಂದರು.

ಗೀತೆಯ ಸಾರ ಅಳವಡಿಸಿಕೊಳ್ಳೋಣ

ಭಗವದ್ಗೀತೆ ಕೇವಲ ಹಿಂದೂಗಳ ಧರ್ಮಗ್ರಂಥವಲ್ಲ. ಅದು ಸಮಸ್ತ ಮಾನವ ಕುಲಕ್ಕೆ ಜೀವನ ಮಾರ್ಗ ತೋರಿಸುವ ವಿಶ್ವಮಾನವ ಗ್ರಂಥ. ಓದು, ಕಂಠಪಾಠ ಮಾತ್ರ ಮಾಡದೆ ಅದರ ಸಾರವನ್ನು ನಿತ್ಯಜಿವನದಲ್ಲಿ ಅಳವಡಿಸಿಕೊಳ್ಳಬೇಕು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಭಾರತೀಯ ಜನಸಂಘ ನಿಷೇಧಿಸಲಾಗಿತ್ತು. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ನಾಗರಿಕರ ಮೂಲಹಕ್ಕು ಮೊಟಕುಗೊಳಿಸಲಾಗಿತ್ತು. ಆ ವೇಳೆ ನಡೆದಿದ್ದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ನನ್ನನ್ನು ಬಂಧಿಸಿ ಒಂದೂವರೆ ತಿಂಗಳು ಕಾಲ ಅಮೃತಸರದ ಜೈಲಿಗೆ ಹಾಕಿದ್ದರು. ಆ ಸಂದರ್ಭದಲ್ಲಿ ಸಂಪೂರ್ಣವಾಗಿ ಶ್ರೀಮದ್​ ಭಗವದ್ಗೀತೆ ಓದುವ ಅವಕಾಶ ದೊರೆಯಿತು ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್​ 

ಸೇವೆ ಶ್ಲಾಘನೀಯ

ಸುಗುಣೇಂದ್ರ ಶ್ರೀ ಮಾತನಾಡಿ, ಸನಾತನ ಧರ್ಮದ ಸಂರಕ್ಷಣೆ ಹಾಗೂ ವಿಶ್ವ ಹಿಂದೂ ಪರಿಷತ್​ನ ಕಾರ್ಯ ವಿಸ್ತಾರಕ್ಕಾಗಿ ಅಲೋಕ್​ ಅವರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ರಾಷ್ಟ್ರೀಯ ವಿಚಾರಧಾರೆಗೆ ಸಂಬಂಧಿಸಿ ವಿಎಚ್​ಪಿ ಮೂಲಕ ಕೈಗೊಳ್ಳುವ ಎಲ್ಲ ಕಾರ್ಯಗಳಲ್ಲಿ ವಿಜಯಿಯಾಗುವಂತೆ ಶ್ರೀಕೃಷ್ಣನ ಸಂಪೂರ್ಣ ಆಶೀರ್ವಾದ ಲಭಿಸಲಿ ಎಂದು ಹರಿಸಿದರು.

ಸಂಸ್ಕಾರಯುತ ಶಿಕ್ಷಣ ವಿಶ್ವಕ್ಕೆ ಅಗತ್ಯ

ಸುವರ್ಣಾ ನದಿಯ ಪ್ರಶಾಂತ ಪರಿಸರದಲ್ಲಿರುವ ಪುತ್ತಿಗೆ ಗುರುಕುಲದ ಕಾರ್ಯಚಟುವಟಿಕೆ ಶ್ಲಾಘಿಸಿದ ಅಲೋಕ್​ ಕುಮಾರ್​, ಭಾರತದ ಪ್ರಾಚೀನ ಗುರುಕುಲ ಪರಂಪರೆಗೆ ಅನುಗುಣವಾಗಿ ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಮತ್ತು ಜೀವನ ಮೌಲ್ಯ ತಿಳಿಸಲಾಗುತ್ತಿದೆ. ಜಗತ್ತಿಗೆ ಕೇವಲ ಉದ್ಯೋಗ ಒದಗಿಸುವ ಶಿಕ್ಷಣವಷ್ಟೇ ಸಾಲದು. ಉತ್ತಮ ಚಾರಿತ್ರ್ಯ, ವಿವೇಕ, ಕರುಣೆ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಬೆಳೆಸುವ ಶಿಕ್ಷಣ ಅತ್ಯಗತ್ಯ. ಬಾಲಕರೊಂದಿಗೆ ಬಾಲಕಿಯರಿಗೂ ಸಮಾನವಾಗಿ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದ ನಿಮಿತ್ತ ಮಠದ ವಿದ್ಯಾರ್ಥಿಗಳೊಂದಿಗಿನ ಸಂವಾದ ನಡೆಸಿ ಮೌಲ್ಯ, ದೇಶಭಕ್ತಿ, ಭಗವದ್ಗೀತೆ, ಯೋಗ ಮತ್ತು ಭಾರತೀಯ ಸಂಸ್ಕೃತಿಯ ಕುರಿತು ಮಾರ್ಗದರ್ಶನ ನೀಡಿದರು.

ವಿಎಚ್​ಪಿ ಪ್ರಾದೇಶಿಕ ಕಾರ್ಯದರ್ಶಿ ಶರಣ್​ ಪಂಪ್ವೆಲ್​, ದ.ಕ. ಜಿಲ್ಲಾ ಕಾರ್ಯಾಧ್ಯಕ್ಷ ಸುನೀಲ್​ ಕೆ., ಉಡುಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್​ ಮೆಂಡನ್​, ಬಿಜೆಪಿ ಜಿಲ್ಲಾ ವಕ್ತಾರ ಮಧುಕರ್​ ಮುದ್ರಾಡಿ, ಅರ್ಚಕ-ಪುರೋಹಿತ-ಮಠ-ಮಂದಿರ ಪ್ರಮುಖ್​ ಗಿರೀಶ್​ ತಂತ್ರಿ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ ಇನ್ನಿತರರು ಉಪಸ್ಥಿತರಿದ್ದರು.

ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಎಲ್ಲ ಗಣ್ಯರನ್ನು ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಬರಮಾಡಿಕೊಂಡರು. ಸುಗುಣ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಮೋದ್​ ಸ್ವಾಗತಿಸಿದರು. ಪುತ್ತಿಗೆ ವಿದ್ಯಾಪೀಠದ ಪ್ರಾಧ್ಯಾಪಕ ಡಾ. ಸುನೀಲ್​ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
"

ಸನಾತನ ಎಂದರೆ ಕೇವಲ ಪ್ರಾಚಿನ ಎಂದರ್ಥವಲ್ಲ. ತನ್ನ ಮೂಲತತ್ತ್ವ ಮತ್ತು ಶಾಶ್ವತ ಚೈತನ್ಯ ಉಳಿಸಿಕೊಂಡು ಕಾಲಕ್ಕನುಗುಣವಾಗಿ ನಿರಂತರ ವಿಕಸನಗೊಳ್ಳುವುದೇ ಸನಾತನ. ಅದು ಕಾಲದೊಂದಿಗೆ ಬದಲಾಗುತ್ತದೆ. ಆದರೆ, ಅದರ ಮೂಲಭಾವ ಸದಾ ಒಂದೇ ಆಗಿರುತ್ತದೆ. ಪ್ರತಿಯೊಬ್ಬರ ಸ್ವಭಾವ, ಅಭಿರುಚಿ, ಬುದ್ಧಿಮಟ್ಟ ಮತ್ತು ಆಧ್ಯಾತ್ಮಿಕ ಸ್ಥಿತಿಗೆ ಅನುಗುಣವಾಗಿ ಉಪಾಸನೆಯ ಮಾರ್ಗ ಆಯ್ಕೆಮಾಡುವ ಸ್ವಾತಂತ್ರ್ಯವನ್ನೂ ಸನಾತನ ಧರ್ಮ ನೀಡುತ್ತದೆ.

— ಅಲೋಕ್​ ಕುಮಾರ್​. ವಿಎಚ್​ಪಿ ರಾಷ್ಟ್ರೀಯ ಅಧ್ಯಕ್ಷ.