ಉಡುಪಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಉಡುಪಿ ಘಟಕದ ವತಿಯಿಂದ, ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆ ಸಹಕಾರದಲ್ಲಿ ಹಾಗೂ ವಿಶುಕುಮಾರ ದತ್ತಿನಿಧಿ ಸಮಿತಿ ಸಹಯೋಗದಲ್ಲಿ ನ.1ರಂದು ಐವೈಸಿ ಸಭಾಂಗಣದಲ್ಲಿ ವಿಶುಕುಮಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಜಾನಪದ ಸಾಹಿತಿ ಬನ್ನಂಜೆ ಬಾಬು ಅಮೀನ್ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಅಶೋಕಕುಮಾರ ಪಡ್ಸು ತಿಳಿಸಿದರು.
ಉಡುಪಿ ಪತ್ರಿಕಾ ಭವನದಲ್ಲಿ ಗುರುವಾರ (ಅ.29) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉದಯೋನ್ಮುಖ ಸಾಹಿತಿ ತಜ್ಞಾ ಆರ್. ಅವರಿಗೆ 'ಡಾ. ಪ್ರಭಾಕರ ನೀರಮಾರ್ಗ ಯುವವಾಹಿನಿ ಯುವ ಸಾಹಿತಿ ಪ್ರಶಸ್ತಿ' ನೀಡಲಾಗುತ್ತಿದೆ. ಮೂಡಬಿದರೆಯ ಆಳ್ವಾಸ್ ಎಜುಕೇಷನ್ ಫೌಂಡೇಶನ್ನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಕಾರ್ಕಳ ನಕ್ರೆಯ ಹಿರಿಯ ಸಾಹಿತಿ ಬಿಪಿನ್ ಚಂದ್ರಪಾಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕಕುಮಾರ ಪಡ್ಸು ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟ್ವಾಳ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಂ ಪೂಜಾರಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಗೋವಾ ಬಿಲ್ಲವ ಸಂಘದ ಗೌರವಾಧ್ಯಕ್ಷ ಚಂದ್ರಹಾಸ ಅಮೀನ್, ವಕೀಲೆ ವಿಜಯಲಕ್ಷ್ಮೀ ವಿಶುಕುಮಾರ ಬೆಂಗಳೂರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಯುವ ಪ್ರತಿಭೆಗಳಿಗೆ ಸ್ಪರ್ಧೆ
ದತ್ತಿನಿಧಿ ಸಂಚಾಲನಾ ಸಮಿತಿಯ ಸಂಚಾಲಕ ಜಗದೀಶ ಕುಮಾರ ಮಾತನಾಡಿ, ಸಮಾರಂಭದ ನಿಮಿತ್ತ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಸಿನಿದನಿ ಕಿರುಚಿತ್ರ ಸ್ಪರ್ಧೆ, ಜ್ಞಾನಮಂಥನ ರಸಪ್ರಶ್ನೆ ಸ್ಪರ್ಧೆ, ವಿಶು ಕಾವ್ಯಾಮೃತ ಕವನ ಸ್ಪರ್ಧೆ ಹಾಗೂ ವಿಶು ವಿಹಂಗಮ ಕೃತಿ ವಿಮರ್ಶೆ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯೂ ಸಹ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದತ್ತನಿಧಿ ಸಂಚಾಲನಾ ಸಮಿತಿಯ ಸಹಸಂಚಾಲಕ ದಯಾನಂದ ಕರ್ಕೇರ ಉಗ್ಗೆಲಬೆಟ್ಟು, ಯುವ ವಾಹಿನಿಯ ಉಡುಪಿ ಅಧ್ಯಕ್ಷ ವಿನೋದ ಮಂಚಿ, ಸಮಿತಿಯ ಕೋಶಾಧಿಕಾರಿ ಸತೀಶ ಕಿಲ್ಪಾಡಿ ಉಪಸ್ಥಿತರಿದ್ದರು.