ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಶ್ರುತಿ 2026 ಕಾರ್ಯಕ್ರಮವನ್ನು ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಕಲಾ ವಿಭಾಗದ ಡೀನ್ ಡಾ.ಭಾಸ್ಕರ್ ಹೆಗಡೆ ಉದ್ಘಾಟಿಸಿದರು. ಪ್ರೊ.ಪದ್ಮನಾಭ ಕೆ., ಕವಿತಾ, ಡಾ.ರವಿ ಎಂ.ಎನ್., ಚೇತನ್, ಅರ್ಪಿತಾ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ತಂಗಡಿ: ಕಲಾವಿಭಾಗದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಹಾಗೂ ಅವರ ಪ್ರತಿಭೆಗಳಿಗೆ ರಚನಾತ್ಮಕ ದೃಷ್ಟಿಕೋನ ನೀಡಲು ಈ ರೀತಿಯ ಕಾರ್ಯಕ್ರಮ ಅತ್ಯಂತ ಉಪಕಾರಿ. ಕಲಾವಿಭಾಗದ ವಿದ್ಯಾರ್ಥಿಗಳು ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಅವಕಾಶ ಹೊಂದಿದ್ದಾರೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಈ ರೀತಿಯ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಕಲಾ ವಿಭಾಗದ ಡೀನ್ ಡಾ.ಭಾಸ್ಕರ್ ಹೆಗಡೆ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಕಾಲೇಜಿನ ಐಕ್ಯುಎಸಿ ಮತ್ತು ಮಾನವಿಕ ಸಂಘ ಆಶ್ರಯದಲ್ಲಿ ಕಲಾವಿದ ವಿದ್ಯಾರ್ಥಿಗಳಿಗಾಗಿ ವಿಶ್ರುತಿ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ.ಪದ್ಮನಾಭ ಕೆ. ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ.ಕವಿತಾ, ಸ್ನಾತ್ತಕೋತ್ತರ ವಿಭಾಗದ ಸಂಚಾಲಕ ಡಾ.ರವಿ ಎಂ.ಎನ್., ಮಾನವಿಕ ಸಂಘದ ಪದಾಧಿಕಾರಿಗಳಾದ ಚೇತನ್ ಹಾಗೂ ಅರ್ಪಿತಾ ಉಪಸ್ಥಿತರಿದ್ದರು.
ಮಾನವಿಕ ಸಂಘದ ಸಂಯೋಜಕ ಪ್ರೊ.ರೊನಾಲ್ಡ್ ಪ್ರವೀಣ್ ಕೊರಾಯ ಪ್ರಸ್ತಾವನೆಗೈದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮಾರುತಿ ಸ್ವಾಗತಿಸಿದರು. ಅಂತಿಮ ಬಿಎ ವಿದ್ಯಾರ್ಥಿ ಜಗದೀಶ್ ಹಾಗೂ ದ್ವಿತೀಯ ಬಿಎ ವಿದ್ಯಾರ್ಥಿನಿ ನಸೀಬಾ ನಿರೂಪಿಸಿದರು. ಅರ್ಪಿತಾ ವಂದಿಸಿದರು.
ಅಂತರ್ ತರಗತಿ ಸ್ಪರ್ಧೆಯಲ್ಲಿ ದ್ವಿತೀಯ ಬಿಕಾಂನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡು, ದ್ವಿತೀಯ ಬಿಎ ವಿದ್ಯಾರ್ಥಿಗಳು ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದರು.
ಇಂದಿನ ಅನೇಕ ಅಧಿಕಾರಿ ವರ್ಗದವರು, ಐಎಎಸ್ ಮತ್ತು ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳೇ ಹೆಚ್ಚು. ಹಾಗಾಗಿ ಕಲಾ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಲು ಈ ರೀತಿಯ ಕಾರ್ಯಕ್ರಮಗಳು ಅನುಕೂಲಕರ.
— ಪ್ರೊ.ಪದ್ಮನಾಭ ಕೆ., ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ