ಪಶ್ಚಿಮ ಘಟ್ಟ 
ಉಡುಪಿ

ಕಸ್ತೂರಿ ರಂಗನ್ ವರದಿ ಹಿಂಪಡೆಯದಿದ್ದರೆ ಉಗ್ರ ಹೋರಾಟ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ಹೊರಡಿಸಿದೆ. ಇದರಲ್ಲೂ ಮಲೆನಾಡಿನ ಗ್ರಾಮೀಣ ಪ್ರದೇಶಗಳ ಜನಜೀವನ ಹಾಗೂ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಹಲವು ನಿರ್ಬಂಧ ಬರುವ ಸಾಧ್ಯತೆ ಇದೆ. ಆದುದರಿಂದ ರೈತರಿಗೆ ಮತ್ತು ಜನತೆಯ ಮಾನಸಿಕ ಶಾಂತಿ ಕೆಡಿಸುವ ಯೋಜನೆ ಹಿಂಪಡೆಯದಿದ್ದರೆ ವೇದಿಕೆ ಉಗ್ರ ಹೋರಾಟ ನಡೆಸಲಿದೆ ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷಿ ಚಟುವಟಿಕೆ, ರಾಸಾಯನಿಕ ಗೊಬ್ಬರ ಬಳಕೆ, ರಸ್ತೆ ಅಭಿವೃದ್ಧಿ ಹಾಗೂ ಇತರ ಮೂಲ ಸೌಕರ್ಯಗಳ ಮೇಲೆ ಯೋಜನೆಯಿಂದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.

ಕರ್ನಾಟಕದಲ್ಲಿ 1269 ಗ್ರಾಮಗಳು

ಕರ್ನಾಟಕದ ಪಶ್ಚಿಮ ಘಟ್ಟ ವ್ಯಾಪ್ತಿಯ 1269 ಗ್ರಾಮಗಳನ್ನು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ 7ನೇ ಕರಡು ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮ ವಲಯವನ್ನಾಗಿ ಸೇರಿಸುವ ಪ್ರಸ್ತಾವನೆ ಮುಂದಿಟ್ಟಿದೆ.
ದ.ಕ. ಜಿಲ್ಲೆಯ 43 ಗ್ರಾಮ, ಚಿಕ್ಕಮಗಳೂರು 137, ಶಿವಮೊಗ್ಗದ 446, ಕೊಡಗು 53, ಉಡುಪಿ 34 ಗ್ರಾಮ ಸೇರಿದಂತೆ ಹಾಸನ, ಉತ್ತರ ಕನ್ನಡ ಜಿಲ್ಲೆಗಳ ಗ್ರಾಮಗಳನ್ನು 7ನೇ ಅಧಿಸೂಚನೆ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಐನೆಕಿದು, ಬಾಳುಗೋಡು, ಬಳ್ಪ, ದೇವಚಳ್ಳ, ಹರಿಹರ ಪಲ್ಲತ್ತಡ್ಕ, ಸುಬ್ರಹ್ಮಣ್ಯ, ಸಿರಿಬಾಗಿಲು, ಬಲ್ಯ, ಬಿಳಿನೆಲೆ, ಗೋಳಿತ್ತೊಟ್ಟು, ಇಚ್ಲಂಪಾಡಿ, ಕೊಂಬಾರು, ಕಲ್ಮಕಾರು, ನಾಲ್ಕೂರು, ಮಡಪ್ಪಾಡಿ, ದೇವಚಳ್ಳ, ಶಿರಾಡಿ, ಗೋಳಿತ್ತೊಟ್ಟು ಮೊದಲಾದ ಗ್ರಾಮ ಸೇರ್ಪಡೆಗೊಂಡಿದೆ ಎಂದರು.
ಪರಿಸರ ಸಂರಕ್ಷಣೆ ನೆಪದಲ್ಲಿ ರೈತರಿಗೆ ಸಮಸ್ಯೆಯಾಗುವ ಯೋಜನೆಗಳ ವಿರುದ್ಧ ವೇದಿಕೆ ಪಕ್ಷಾತೀತ, ಜಾತ್ಯಾತೀತ ಹಾಗೂ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು. ಕೇಂದ್ರ ಪರಿಸರ ಇಲಾಖೆ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಹಲವು ಬಾರಿ ಕೇಳಿದೆ. ರಾಜ್ಯ ಸರ್ಕಾರ ಪಕ್ಷಾತೀತವಾಗಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಬೇಡ ಎಂಬ ನಿಲುವು ವ್ಯಕ್ತಪಡಿಸಿದೆ. ಆದರೂ ಕೇಂದ್ರ ಪರಿಸರ ಇಲಾಖೆ ಈ ಸಂಬಂಧ ಅಧಿಸೂಚನೆ ಹೊರಡಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಿಲನ್ ಬಾಳಿಕಳ, ಜಿಲ್ಲಾ ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ದಾಮೋದರ ಹಾಗೂ ಅಶೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.