ಬದಿಯಡ್ಕ ಪರಿಸರದಲ್ಲಿ ವಿದ್ಯುತ್ ಕಂಬಗಳ ಮೇಲೆ ಬಳ್ಳಿಗಳು ಹಬ್ಬಿರುವುದು. 
ಉಡುಪಿ

ವಿದ್ಯುತ್ ಕಂಬಗಳನ್ನು ಆವರಿಸಿದ ಬಳ್ಳಿಗಳು

ಬದಿಯಡ್ಕ: ಮಳೆಗಾಲದಲ್ಲಿ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೇಗವಾಗಿ ಬೆಳೆಯುವ ಹಸಿರು ಬಳ್ಳಿಗಳು ವಿದ್ಯುತ್ ಕಂಬಗಳು ಮತ್ತು ಸಂಪರ್ಕ ತಂತಿಗಳ ಮೇಲೆ ಹಬ್ಬಿ ಅಪಾಯವನ್ನುಂಟು ಮಾಡುತ್ತಿವೆ.

ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಸಿರು ಬಳ್ಳಿಗಳು ವಿದ್ಯುತ್ ಕಂಬಗಳನ್ನು ವ್ಯಾಪಕವಾಗಿ ಆವರಿಸಿರುವುದು ಕಂಡುಬಂದಿದೆ. ಅನೇಕ ಪ್ರದೇಶಗಳಲ್ಲಿ ಬಳ್ಳಿ ಆವರಿಸಿರುವುದರಿಂದ ವಿದ್ಯುತ್ ಕಂಬಗಳು ಮತ್ತು ತಂತಿಗಳೇ ಗೋಚರಿಸುವುದಿಲ್ಲ.
ಪಂಚಾಯಿತಿ ಅಧಿಕಾರಿಗಳು ಅಥವಾ ಗ್ರಾಹಕರು ವಿದ್ಯುತ್ ಕಂಬಗಳ ಮೇಲೆ ಹರಡಿರುವ ಬಳ್ಳಿಗಳನ್ನು ಕಡಿಯಲು ಸಾಧ್ಯವಿಲ್ಲ.
ಕೆಎಸ್‌ಇಬಿ ಅನುಮತಿ ಇಲ್ಲದೆ ಅವುಗಳನ್ನು ತೆರವು ಮಾಡುವಂತಿಲ್ಲ. ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳಬಹುದು ಎಂದು ಕೆಎಸ್‌ಇಬಿ ಅಧಿಕಾರಿಗಳು ಹೇಳುತ್ತಾರೆ. ಮಳೆಗಾಲವಾದ್ದರಿಂದ ವಿದ್ಯುತ್ ಕಂಬಗಳನ್ನು ಆವರಿಸಿರುವ ಬಳ್ಳಿಗಳನ್ನು ಸ್ವಯಂಪ್ರೇರಣೆಯಿಂದ ಕತ್ತರಿಸಲು ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿದ್ಯುತ್ ಕಂಬಗಳಲ್ಲಿ ವ್ಯಾಪಕವಾಗಿ ಕಾಡು ಬಳ್ಳಿಗಳು ಹಬ್ಬಿರುವುದು ಅಪಾಯದ ಭೀತಿ ತಂದೊಡ್ಡಿದೆ. ವಿದ್ಯುತ್ ಪ್ರಸರಣ ಅಧಿಕಾರಿಗಳಿಗೆ ಹಲವು ಬಾರಿ ಈ ಬಗ್ಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಹಕರಿಗೇ ನೇರವಾಗಿ ಕಡಿಯಲು ಅವಕಾಶ ನೀಡುವುದು ಸೂಕ್ತ.

— ತಿರುಮಲೇಶ್ವರ ಭಟ್ ಪಜ್ಜ, ಸ್ಥಳೀಯ