ಕೊಂಬಾರು ಗ್ರಾ.ಪಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಯಿತು. ಆನಂದ ಮಿತ್ತಬೈಲ್, ಶಶಿಧರ್ ಬೊಟ್ಟಡ್ಕ, ಪವನ್ ಚೀಮ್ಲಗುರಿ, ಲೋಕೇಶ್ ಸರಪ್ಪಾಡಿ ಮತ್ತಿತರರು ಇದ್ದರು.
ಕಡಬ: ಕೊಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಬಾರು-ಪಲ್ಲೆತ್ತಿಮಾರ್ ರಸ್ತೆ ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಹೊಳ್ಳಾರು ನೇತೃತ್ವದಲ್ಲಿ ಬುಧವಾರ ಗ್ರಾಮಸ್ಥರು ಕೊಂಬಾರು ಗ್ರಾಪಂ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು.
ಬೊಳ್ಳಡ್ಕದಿಂದ ಪಲ್ಲೆತ್ತಿಮಾರ್-ಪೊರ್ದೆಲ್-ಡಮ್ಮಡ್ಕ-ಕೆಂಜಾಳ ಸಂಪರ್ಕಿಸುವ ಗ್ರಾಪಂ ರಸ್ತೆ ಪಲ್ಲೆತ್ತಿಮಾರ್ ಎಂಬಲ್ಲಿ ಸುಮಾರು 120 ಮೀಟರ್ ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ.
ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಸಂಬಂಧಪಟ್ಟ ಇಲಾಖೆಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ನೀಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಭೇಟಿ: ಬೆಳಗ್ಗೆ ಆರಂಭವಾದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸಂಜೆ ಕಡಬ ತಹಸೀಲ್ದಾರ್ ಗಣೇಶ್ ಸವಣೂರ ಭೇಟಿ ನೀಡಿದರು. 3 ದಿನಗಳ ಒಳಗೆ ರಸ್ತೆಯನ್ನು ಸಂಚಾರ ಯೋಗ್ಯವಾಗಿಸುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಉಪವಾಸ ಸತ್ಯಾಗ್ರಹ ವಾಪಸ್ ಪಡೆದರು.
ದಲಿತ ಸಂಘರ್ಷ ಸಮಿತಿ ಮುಖಂಡ ಆನಂದ ಮಿತ್ತಬೈಲ್, ಶಶಿಧರ್ ಬೊಟ್ಟಡ್ಕ, ಪವನ್ ಚೀಮ್ಲಗುರಿ, ಲೋಕೇಶ್ ಸರಪ್ಪಾಡಿ, ಅಶೋಕ್ ಕಾಪಾರು, ದಯಾನಂದ ಕಾಪಾರು, ವಿನೋದ್ ಹೊಳ್ಳಾರು, ನೀಲಪ್ಪ ಗೌಡ ಮುಗೇರು, ಯತೀಶ್ ಡಮ್ಮಡ್ಕ, ಆಶಾ ಓಡೋಳಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ರಸ್ತೆ ಸಮಸ್ಯೆಯನ್ನು ಪರಿಶೀಲಿಸಿ ತಾಪಂ ಇಒ ಜತೆಗೆ ಚರ್ಚಿಸಿ 3 ದಿನಗಳಲ್ಲಿ ರಸ್ತೆಯನ್ನು ಸುಗಮಸಂಚಾರಕ್ಕೆ ಅನುಕೂಲವಾಗುವಂತೆ ಮಾಡಿಕೊಡುವುದಾಗಿ ತಹಸೀಲ್ದಾರ್ ಭರವಸೆ ನೀಡಿದ ಮೇರೆಗೆ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದೇವೆ. ಒಂದು ವೇಳೆ ಭರವಸೆ ಈಡೇರದಿದ್ದರೆ ಮತ್ತೆ ಹೋರಾಟ ಆರಂಭವಾಗಲಿದೆ.
— ರಾಧಾಕೃಷ್ಣ ಹೊಳ್ಳಾರು ಮುಗೇರಡ್ಕ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ