ಉಡುಪಿ ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ವಿದ್ಯಾಮಾನ್ಯ ತೀರ್ಥರ ಪೀಠಾರೋಹಣದ ಶತಮಾನೋತ್ಸವದ ಸಂಭ್ರಮಾಚರಣೆ ನಿಮಿತ್ತ ಮೈಸೂರಿನ ವಿದ್ವಾಂಸ ಬಾದರಾಯಣ ಆಚಾರ್ಯ ಅವರಿಗೆ 'ಜಯಶ್ರೀ ಕಂಬುಕಂಠ' ಪ್ರಶಸ್ತಿ ಹಾಗೂ ನಾಡಿನ ಖ್ಯಾತ 18 ಪಂಡಿತರಿಗೆ ವಿದ್ಯೇಶ ತೀರ್ಥ ಶ್ರೀಪಾದರು ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದರು. 
ಉಡುಪಿ

ಸವಾಲು, ಸಂಶಯಗಳಿಗೆ ಮಧ್ವರ ಗ್ರಂಥಗಳೇ ಪರಿಹಾರ

ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರ ಆಶೀರ್ವಚನ

* ಬಾದರಾಯಣ ಆಚಾರ್ಯರಿಗೆ 'ಜಯಶ್ರೀ ಕಂಬುಕಂಠ' ಪ್ರಶಸ್ತಿ ಪ್ರದಾನ

ಉಡುಪಿ: ಮಹಾಭಾರತವನ್ನು 5ನೇ ವೇದವೆನ್ನುತ್ತಾರೆ. ಅದಕ್ಕೆ ಆಚಾರ್ಯ ಮಧ್ವರು ಸಮರ್ಥವಾಗಿ ತಾತ್ಪರ್ಯ ನಿರ್ಣಯ ರಚಿಸಿ, ವಿದ್ವತ್​ ಲೋಕಕ್ಕೆ ಮಹೋನ್ನತ ಕೊಡುಗೆ ನೀಡಿದ್ದಾರೆ. ಬದುಕಿನ ಪ್ರತಿಯೊಂದು ಸಂದರ್ಭದಲ್ಲೂ ಎದುರಾಗುವ ಜಿಜ್ಞಾಸೆ, ಸಮಸ್ಯೆ, ಸವಾಲು ಮತ್ತು ಸಂಶಯಗಳಿಗೆ ಶ್ರೀ ಮಧ್ವರು ರಚಿಸಿದ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವು ಪರಿಹಾರ ಸೂಚಿಸುತ್ತದೆ ಎಂದು ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ತಮ್ಮ 47ನೇ ಚಾತುರ್ಮಾಸ್ಯ ಸಂದರ್ಭದಲ್ಲಿ ವಿದ್ಯಾಮಾನ್ಯ ತಿರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆ ನಿಮಿತ್ತ ನಡೆಯುತ್ತಿರುವ ವಿದ್ವಾಂಸರ ಐದನೇ ಹಂತದ ಸನ್ಮಾನ, ಬಿರುದು ಪ್ರದಾನ ಸಮಾರಂಭದಲ್ಲಿ ಶನಿವಾರ (ಸೆ.12) ಆಯೋಜಿಸಿದ್ದ 18 ವಿದ್ವಾಂಸರಿಗೆ ಸ್ಮರಣಿಕೆ, ಮೈಸೂರಿನ ವಿದ್ವಾಂಸ ಬಾದರಾಯಣ ಆಚಾರ್ಯರಿಗೆ 'ಜಯಶ್ರೀ ಕಂಬುಕಂಠ' ಪ್ರಶಸ್ತಿ ಪ್ರದಾನಿಸಿ ಆಶೀರ್ವಚನ ನೀಡಿದರು.
ಇತಿಹಾಸ ಮರೆಯದು
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವಿದ್ವಾನ್​ ಹರಿನಾರಾಯಣ ಅಸ್ರಣ್ಣ ಮಾತನಾಡಿ, ಕಟೀಲು ದೇವಸ್ಥಾನದಲ್ಲಿ ದೇವಿಯ ಆರಾಧನೆಯ ಕುರಿತು ಬಂದ ಅನೇಕ ಸಂಶಯಗಳಿಗೆ ವಿದ್ಯಾಮಾನ್ಯ ತೀರ್ಥರು ಸಮರ್ಪಕ ಉತ್ತರ ನೀಡುತ್ತಿದ್ದರು. ದೇವಳದಲ್ಲಿ ನಡೆಯುತ್ತಿರುವ ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆಯನ್ನೂ ನೀಡಿದ್ದರು. ಅದನ್ನು ಇತಿಹಾಸ ಮರೆಯದು ಎಂದರು.
ನಾಡಿನ ಹಿರಿಯ ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 18 ವಿದ್ವಾಂಸರು ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವನ್ನು 8 ದಿನಗಳ ಕಾಲ 3 ಬಾರಿ ಪಾರಾಯಣ ಮಾಡಿದ್ದು ವಿಶೇಷವಾಗಿತ್ತು.
"

ಭಂಡಾರಿಕೇರಿ ಶ್ರೀಗಳ 47ನೇ ಚಾತುಮಾರ್ಸ್ಯ ಎಲ್ಲ ರೀತಿಯಿಂದಲೂ ಅಸಾಧಾರಣವಾಗಿದೆ. ವಿದ್ಯಾಮಾನ್ಯತಿರ್ಥರು ಸಮಾಜಕ್ಕೆ ಆದರ್ಶ ಯತಿಗಳಾಗಿ ಬಾಳಿ ವಿದ್ವತ್ಸಮಾಜಕ್ಕೆ ಬೆಳಕಾದವರು. ಅಂತಹ ಶ್ರೇಷ್ಠ ಯತಿಗಳ ಪೀಠಾರೋಹಣದ ಶತಮಾನೋತ್ಸವವನ್ನು ವೈಭವದಿಂದ ಆಚರಿಸುವ ಮೂಲಕ ವಿದ್ಯೇಶ ತೀರ್ಥರು ವಿದ್ವತ್​ ಸಮಾಜಕ್ಕೆ ಮಹೋನ್ನತ ಸೇವೆ ಸಮರ್ಪಿಸುತ್ತಿದ್ದಾರೆ.