ಉಡುಪಿಯ ಇಂದ್ರಾಣಿಯಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಕೆ. ಜಯಪ್ರಕಾಶ್ ಹೆಗ್ಡೆ. ಭೂಪತಿ ಶೆಟ್ಟಿ, ಜಯಕರ್ ಶೆಟ್ಟಿ ಇಂದ್ರಾಳಿ, ಬಿ.ಕುಶಲ್ ಶೆಟ್ಟಿ, ಪ್ರಸಾದರಾಜ್ ಕಾಂಚನ್, ರಮೇಶ್ ಕಾಂಚನ್, ಶೋಭಾ ಡಿ. ಶೆಟ್ಟಿ ಇತರರಿದ್ದರು.
* ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಚನ
* ಇಂದ್ರಾಣಿ ನಾಗದೇವರ ಪುನ; ಪ್ರತಿಷ್ಠೆಯ ಧಾರ್ಮಿ ಸಭೆ
ಉಡುಪಿ: ಆಸ್ತಿಕ ಹಾಗೂ ನಾಸ್ತಿಕ ಸಿದ್ಧಾಂತ ಎರಡೂ ಇದ್ದರೂ ಸಹ ಸ್ವಾರ್ಥಕ್ಕಾಗಿ ಬದುಕುವವರ ಸಿದ್ಧಾಂತದ ನೆರಳಿನಲ್ಲಿ ಜಗತ್ತು ಕ್ಷೇಮವಾಗಿರಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಹಿರಿಯರು ಬಲ ಮತ್ತು ದುರ್ಬಲ ಜನರು ಸಮಾನವಾಗಿ ಬಾಳುವಂತಾಗಲು ಶಾಸನ ರೂಪಿಸಿದ್ದರಿಂದ ಧರ್ಮದ ಉದಯವಾಯಿತು. ಅಂತಹ ಧರ್ಮದ ರಕ್ಷಣೆಗೆ ಶ್ರದ್ಧಾ ಕೇಂದ್ರಗಳು ಗಟ್ಟಿಯಾಗಿರಬೇಕು. ಬದುಕಿನಲ್ಲಿ ನಂಬಿಕೆಯ ಪಾತ್ರ ದೊಡ್ಡದು. ನಾವು ನಂಬಿಕಯೊಂದಿಗೇ ಬದುಕಬೇಕಾದವರು. ಅದಿಲ್ಲದಿದ್ದರೆ ಬದುಕು ದುಸ್ಥರವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಇಂದ್ರಾಣಿ ಶ್ರೀಮುಖ್ಯಪ್ರಾಣ ಗುಡಿಯ ಸಮೀಪದ ಪುಷ್ಕರಿಣಿ ಬಳಿಯ ನಾಗದೇವರ ಪುನ; ಪ್ರತಿಷ್ಠೆ ನಿಮಿತ್ತ ಶ್ರೀ ಪಂಚದುರ್ಗಾಪರಮೇಶ್ವರಿ ದೇಗುಲದಲ್ಲಿ ಮಂಗಳವಾರ (ಏ.7) ಸಂಜೆ ಆಯೋಜಿಸಿದ್ದ ಧಾರ್ಮಿ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಾಗಾರಾಧನೆಗಿದೆ ವಿಶೇಷ ಮಹತ್ವ
ಕರಾವಳಿಯಲ್ಲಿ ಪ್ರಮುಖವಾಗಿರುವ ನಾಗಾರಾಧನೆ ದೇಶ-ವಿದೇಶದಲ್ಲೂ ಇದೆ. ನಾಗದೇವ ಪ್ರಸನ್ನನಾದರೆ ಅನುಗ್ರಹ, ಕ್ರುದ್ಧನಾದರೆ ಶಾಪ. ಇವೆರಡೂ ಸಹ ಕ್ಷಿಪ್ರವಾಗಿ ಕರಾವಳಿ ಜಿಲ್ಲೆಯಲ್ಲಿ ಲಭಿಸುತ್ತದೆ. ಸಂಪತ್ತು, ಸಂತತಿ, ಆರೋಗ್ಯಕ್ಕೆ ನಾಗದೇವ ಅಧಿದೇವನಾಗಿದ್ದು ಆತನ ಆರಾಧನೆ ಅತ್ಯಗತ್ಯ. ಇಂದ್ರಾಣಿಯಲ್ಲಿ ಪುನ; ಪ್ರತಿಷ್ಠೆಗೊಂಡ ನಾಗದೇವ ಸಕಲರಿಗೂ ಅನುಗ್ರಹಿಸಲಿ ಎಂದು ಶ್ರೀಗಳು ಹಾರೈಸಿದರು.
ಕಾಂಚನ ಹುಂಡೈ ಆಡಳಿತ ನಿರ್ದೇಶಕ ಪ್ರಸಾದ್ರಾಜ್ ಕಾಂಚನ್, ಗ್ಯಾರಂಟಿ ಯೋಜನೆಗಳ ಉಡುಪಿ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿದರು. ವಿದ್ವಾಂಸ ವಾದಿರಾಜ ಕೊಲಕಾಡಿ ಧಾರ್ಮಿಕ ಪ್ರವಚನ ನೀಡಿದರು. ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಗುಡಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಭೂಪತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಇಂದ್ರಾಳಿ ಪಂಚದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಕುಶಲ್ ಶೆಟ್ಟಿ, ಧಾರ್ಮಿಕ ಸಮಿತಿಯ ಸಂಚಾಲಕರಾದ ಯೋಗೇಶ್ ಭಟ್, ಮುಖ್ಯಪ್ರಾಣ ದೇವರ ಅರ್ಚಕ ಗೋಪಾಲಕೃಷ್ಣ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಕುಮಾರ ಆಚಾರ್ಯ, ವಸಂತಿ ನಾಯಕ್, ರಾಘವೇಂದ್ರ ನಾಯಕ್, ಸುರೇಶ್ ಶೆಟ್ಟಿಗಾರ್, ರಾಕೇಶ್ ರೈ, ಶೋಭಾ ಡಿ. ಶೆಟ್ಟಿ, ನಗರಸಭಾ ಮಾಜಿ ಸದಸ್ಯ ಅಶೋಕ್ ನಾಯಕ್ ಉಪಸ್ಥಿತರಿದ್ದರು.
ಸುಮತಿ ನಾಯಕ್ ಪ್ರಾರ್ಥಿಸಿದರು. ಇಂದ್ರಾಣಿ ಮುಖ್ಯಪ್ರಾಣ, ನಾಗದೇವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರ್ಮಿಕ ಸಮಿತಿಯ ಸಂಚಾಲಕ ಪ್ರದ್ಯುಮ್ನ ಪ್ರಜತ್ತಾಯ ವಂದಿಸಿದರು. ಸಾಧನಾ ಭಟ್ ಕಾರ್ಯಕ್ರಮ ನಿರೂಪಿಸಿದರು.
ನೃತ್ಯಾಮೃತಂ, ಯಕ್ಷಗಾನ ಪ್ರದರ್ಶನ
ಇಂದ್ರಾಣಿ ನಾಗದೇವರ ಪುನ; ಪ್ರತಿಷ್ಠೆ ನಿಮಿತ್ತ ಬೆಳಗ್ಗೆ ಪ್ರಧಾನ ಹೋಮ ನಡೆಯಿತು. ಬಳಿಕ ಸರ್ಪತ್ರಯ ಹೋಮ, ಕೂಷ್ಮಾಂಡ ಹೋಮ, ಆಶ್ಲೇಷಾ ಬಲಿ, 49 ಕಲಶಾರಾಧನೆ, ಪಂಚಾಮೃತ ಕಲಶಾಭಿಷೇಕ, ಮಹಾಪೂಜೆ, ವಟು ಆರಾಧನೆ, ಅನ್ನ ಸಂತರ್ಪಣೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ದಿಶಾ ಅವರಿಂದ 'ನೃತ್ಯಾಮೃತಂ' ಹಾಗೂ ಸಭಾ ಕಾರ್ಯಕ್ರಮದ ಬಳಿಕ ಯಕ್ಷನಿಧಿ ಮೂಡುಬಿದಿರೆ ಯಕ್ಷಗಾನ ಶಿಕ್ಷಣ ಸಂಸ್ಥೆ ಮತ್ತು ಯುವ ಮೇಳದಿಂದ 'ವೀರಮಣಿ ಕಾಳಗ' ಯಕ್ಷಗಾನ ಪ್ರದರ್ಶನಗೊಂಡಿತು.
ಜೀವನದಲ್ಲಿ ಭಯ-ಭಕ್ತಿ ಎರಡೂ ಇದೆ. ಭಯದಿಂದ ದೈವಾರಾಧನೆ, ಭಕ್ತಿಯಿಂದ ದೇವರ ಆರಾಧನೆ ಮಾಡುತ್ತಾರೆ. ಇದು ಕರ್ಮವಾದರೆ, ನಾವು ಮಾಡುವ ಕರ್ತವ್ಯವೇ ಧರ್ಮವಾಗಿದೆ. ನಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು. ಯಾವ ದೇವರೂ ಸಹ ಇನ್ನೊಬ್ಬರಿಗೆ ತೊಂದರೆ ಕೊಡುವಂತೆ ಹೇಳಿಲ್ಲ. ದೇವರ ಹೆಸರಿನಲ್ಲಿ ತೊಂದರೆ ಕೊಡುವವರಿಗೆ ಭಕ್ತಿ ಇಲ್ಲ ಎಂದರ್ಥ. ದೇಗುಲದ ಅಭಿವೃದ್ಧಿ ಮೂಲಕ ಜನಸಾಮಾನ್ಯರಿಗಿರುವ ಕಷ್ಟ, ಸಮಸ್ಯೆ ನಿವಾರಿಸುವ ಕೆಲಸವೂ ಆಗಲಿ.