ಕುಮಾರಧಾರ ಪರಿಸರ ಸಂರಕ್ಷಣಾ ಸಮಿತಿಯ ಜೀವವೈವಿಧ್ಯ ಸಮಾವೇಶ ಮತ್ತು ಅಭಿನಂದನಾ ಸಭೆಯಲ್ಲಿ ಸುಬ್ರಹ್ಮಣ್ಯ ಶ್ರೀ ಆರ್ಶೀವಚನ ನೀಡಿದರು. ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ವಿಜ್ಞಾನಿ ಟಿ.ವಿ.ರಾಮಚಂದ್ರ, ಕರುಣಾಕರ ಗೋಗಟೆ, ಪ್ರೀತಂ, ಪವಿತ್ರಾ ಮತ್ತಿತರರಿದ್ದರು. 
ಉಡುಪಿ

ಉರುಂಬಿ ಅಣೆಕಟ್ಟು ವಿರುದ್ಧದ ಹೋರಾಟಕ್ಕೆ ಜಯ

ಕಡಬ: ಕುಮಾರಧಾರಾ ನದಿಗೆ ಉರುಂಬಿಯಲ್ಲಿ ಅಣೆಕಟ್ಟು ನಿರ್ಮಾಣ ಪ್ರಸ್ತಾಪದ ವಿರುದ್ಧ ಕುಮಾರಧಾರ ಪರಿಸರ ಸಂರಕ್ಷಣಾ ಸಮಿತಿಯ ನಿರಂತರ ಹೋರಾಟದ ಫಲವಾಗಿ ಸರ್ಕಾರ ಅಣೆಕಟ್ಟು ನಿರ್ಮಾಣ ಕೈಬಿಟ್ಟಿರುವುದು ಸಂತಸದ ವಿಚಾರ. ಸತ್ಯನಾರಾಯಣ ಪೂಜೆ ಮೂಲಕ ಹೋರಾಟ ಆರಂಭಿಸಿದ್ದು, ದೇವಾನುಗ್ರಹದಿಂದ ಫಲ ದೊರೆತಿದೆ. ಪರಿಸರ ಮತ್ತು ದೇವರು ಬೇರೆ ಅಲ್ಲ, ಪರಿಸರ ಪ್ರೀತಿ ಮೂಲಕ ದೇವರನ್ನು ಕಾಣಬಹುದಾಗಿದೆ, ಅದನ್ನು ಇಲ್ಲಿ ಕಾಣುವಂತಾಗಿದೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಸೋಮವಾರ ಪೆರಾಬೆ ಗ್ರಾಮದ ಉರುಂಬಿಯಲ್ಲಿ ಕುಮಾರಧಾರಾ ನದಿ ತಟದಲ್ಲಿ ಪರಿಸರ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಸತ್ಯನಾರಾಯಣ ಪೂಜೆ, ಕುಮಾರಧಾರಾ ನದಿಗೆ ಗಂಗಾಪೂಜೆ ಮತ್ತು ಜೀವವೈವಿಧ್ಯ ಸಮಾವೇಶ ಮತ್ತು ಅಭಿನಂದನಾ ಸಭೆಯಲ್ಲಿ ಆರ್ಶೀವಚನ ನೀಡಿದರು.
ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಶ್ಚಿಮಘಟ್ಟ ಜೀವವೈವಿಧ್ಯಗಳ ತಾಣವಾಗಿದ್ದು, ಸರ್ಕಾರಗಳು ಸುಸ್ಥಿರ ಅಭಿವೃದ್ಧಿ ಹೆಸರಲ್ಲಿ ವಿವಿಧ ಯೋಜನೆಗಳಿಗೆ ಕೋಟ್ಯಂತರ ರೂ. ವ್ಯಯ ಮಾಡುತ್ತದೆ ಆದರೆ ನಮ್ಮ ನದಿ, ಕಣಿವೆ, ಪಶ್ಚಿಮಘಟ್ಟ ಅಭಿವೃದ್ಧಿಗಾಗಿ ಯಾವುದೇ ಯೋಜನೆ ರೂಪಿಸುವುದಿಲ್ಲ. ಈಗಾಗಲೇ ಎತ್ತಿನಹೊಳೆ ಯೋಜನೆಗೆ 24 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. 19,400 ಕೋಟಿಯಷ್ಟು ಕಾಡು ನಾಶವಾಗಿದೆ. ಆದರೆ ಚಿಕ್ಕಬಳ್ಳಾಪುರಕ್ಕೆ ನೀರು ಪೂರೈಕೆ ಸಾಧ್ಯವಾಗಿಲ್ಲ. ಇದೀಗ ಇದೇ ಪರಿಸರದಲ್ಲಿ ಮತ್ತೆ 3 ಡ್ಯಾಂ ನಿರ್ಮಾಣ ಆಗಲಿದ್ದು, ಕೆಂಪುಹೊಳೆ, ಗುಂಡ್ಯ ಹೊಳೆ ಮೂಲಕ ಕುಮಾರಧಾರಾ, ನೇತ್ರಾವತಿಗೆ ಬರುವ ಅಲ್ಪಸ್ವಲ್ಪ ನೀರಿಗೂ ತಡೆಯಾಗಲಿದೆ. ಮುಂದೊಂದು ದಿನ ಈ ಭಾಗಕ್ಕೆ ನೀರೇ ಇಲ್ಲದಂತಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಭಾರತೀಯ ಜೀವ ವಿಜ್ಞಾನ ಸಂಸ್ಥೆ ವಿಜ್ಞಾ ಟಿ.ವಿ.ರಾಮಚಂದ್ರ, ಕುಮಾರಧಾರಾ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ಕರುಣಾಕರ ಗೋಗಟೆ, ಜೀವವೈವಿಧ್ಯ ಸಂಸ್ಥೆ ಹಿರಿಯ ವಿಜ್ಞಾನಿ ಪ್ರೀತಂ, ನಿರ್ದೇಶಕಿ ಪವಿತ್ರಾ, ಕಡಬ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಾನೂನು ಸಲಹೆಗಾರ ಶ್ರೀನಿವಾಸ್, ಹೋರಾಟ ಸಮಿತಿ ಉಪಾಧ್ಯಕ್ಷ ಗೋಪಾಲಕೃಷ್ಣ, ಎಲ್ಸಿ ತೋಮಸ್ ಇದ್ದರು. ಸತ್ಯನಾರಾಯಣ ಪೂಜೆ ಬಳಿಕ ಗಂಗಾ ಪೂಜೆ ನಡೆಯಿತು. ಹೋರಾಟ ಸಮಿತಿ ಪ್ರಮುಖ ಕಿರಣ್ ಗೋಗಟೆ ವಂದಿಸಿದರು. ಉಪನ್ಯಾಸಕ ಅಜಿತ್ ಹೆಬ್ಬಾರ್ ನಿರೂಪಿಸಿದರು.