ಉಡುಪಿ ಮಣಿಪಾಲದ ಮಾಹೆಯಲ್ಲಿ ಆಯೋಜಿಸಿದ್ದ 'ಆಟಿದ ತುಳು ಪರ್ಬ' ಕಾರ್ಯಕ್ರಮಕ್ಕೆ ಡಾ.ಎಚ್.ಎಸ್. ಬಲ್ಲಾಳ್ ಚಾಲನೆ ನೀಡಿದರು. ಡಾ. ಶರತ್ ಕೆ. ರಾವ್, ಮ್ಯಾಥ್ಯೂಸ್ ಜೇಕಬ್, ಡಾ. ಕರುಣಾಕರ್ ಎ. ಕೋಟೆಗಾರ್, ಡಾ. ಶೋಭಾ ಕಾಮತ್, ಪ್ರೊ. ಪ್ರವೀಣ್ ಶೆಟ್ಟಿ ಇದ್ದರು.
* ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಕರೆ
* ಮಾಹೆಯಲ್ಲಿ "ಆಟಿದ ತುಳು ಪರ್ಬ'ಕ್ಕೆ ಚಾಲನೆ
ಉಡುಪಿ: ಮಾಹೆಯಲ್ಲಿ 'ಆಟಿದ ತುಳು ಪರ್ಬ' ಆಯೋಜಿಸುವ ಮೂಲಕ ಉನ್ನತ ಶಿಕ್ಷಣ ಸಂಸ್ಥೆಯೊಂದು ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತಿದೆ. ನಾವು ವಿಶ್ವಮಟ್ಟದಲ್ಲಿ ಹೆಮ್ಮರವಾಗಿ ಬೆಳೆದಿದ್ದರೂ ಸಹ ನಮ್ಮ ಮೂಲ ಬೇರುಗಳನ್ನು ಮರೆಯುಲಾರೆವು. ಇದಕ್ಕೆ ಈ ಕಾರ್ಯಕ್ರಮವೇ ನಿದರ್ಶನ. ಮುಂದಿನ ತಲೆಮಾರಿಗೆ ಈ ನೆಲದ ಉನ್ನತ ಸಂಸ್ಕೃತಿ ದಾಟಿಸುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಆಟಿದ ತುಳು ಪರ್ಬವು ಭಾರತೀಯ ಜ್ಞಾನಪರಂಪರೆಯ ಮಹತ್ವ ಸಾರುತ್ತವೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅನಿಸಿಕೆ ವ್ಯಕ್ತಪಡಿಸಿದರು.
ಮಣಿಪಾಲದಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಗುರುವಾರ (ಜು.16) ಆಯೋಜಿಸಿದ್ದ ಮೂರು ವಾರಗಳ ಕಾಲ ನಡೆಯಲಿರುವ 'ಆಟಿದ ತುಳು ಪರ್ಬ' ಬಹುಮುಖಿ ಚಟುವಟಿಕೆಗಳ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, ತಂತ್ರಜ್ಞಾನ ಹಾಗೂ ವಿಜ್ಞಾನ ವಿಭಾಗದ ಸಹಕುಲಪತಿ ಡಾ. ಕರುಣಾಕರ್ ಎ. ಕೋಟೆಗಾರ್, ಮಂಗಳೂರು ಮಾಹೆ ಕ್ಯಾಂಪಸ್ನ ಸಹಕುಲಪತಿ ಡಾ.ದಿಲೀಪ್ ಜಿ. ನಾಯಕ್, ಮಾಹೆ ದುಬೈ ಕ್ಯಾಂಪಸ್ನ ಸಹಕುಲಪತಿ ಕರ್ನಲ್ (ಡಾ.) ಸುಧೀಂದ್ರ, ಕುಲಸಚಿವ ಡಾ. ಗಿರಿಧರ್ ಕಿಣಿ, ಮಾಹೆಯ ಸಿಇಒ ಡಾ. ಆನಂದ್ ವೇಣುಗೋಪಾಲ್, ಮಾಹೆಯ ಘಟಕ ಸಂಸ್ಥೆಗಳ ಮುಖ್ಯಸ್ಥರು, ಬೋಧಕ ವರ್ಗ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಸಂಯೋಜನಾ ಸಮಿತಿಯ ಸಂಯೋಜಕಿ ಡಾ. ಶೋಭಾ ಕಾಮತ್ ಸ್ವಾಗತಿಸಿದರು. ಅಂತರ್ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ (ಸಿಐಎಸ್ಡಿ) ಕೇಂದ್ರ ಸಂಯೋಜಕ ಪ್ರೊ. ಪ್ರವೀಣ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾನವಸಂಪನ್ಮೂಲ ವಿಭಾಗದ ನಿರ್ದೇಶಕ ಸತೀಶ್ ಪೈ ಹಾಗೂ ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ಭರತ್ ಕುಮಾರ್ ಎಚ್. ಇವರಿಗೆ ಡಾ. ಎಚ್.ಎಸ್. ಬಲ್ಲಾಳ್ ಅವರು ಸಾಂಪ್ರದಾಯಿಕ ಪದ್ಧತಿಯಲ್ಲಿ 'ಆಟಿದ ಪರ್ಬ'ದ ವೀಳ್ಯ ಕೊಟ್ಟು ಸರಣಿ ಮುನ್ನಡೆಸುವ ಹೊಣೆ ವಹಿಸಿದರು. ನಿತೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
"
ಮಾಹೆಯು ಶಿಕ್ಷಣ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ವಿಶ್ವವೇ ಗಮನಿಸುವ ಕೆಲಸ ಮಾಡುತ್ತಿದೆ. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ತುಳುವರೊಂದಿಗೆ ಕರ್ನಾಟಕದ ಮತ್ತು ಭಾರತದ ಇನ್ನಿತರ ರಾಜ್ಯಗಳ ಭಾಷಿಗರು, ವಿದೇಶದ ವಿದ್ಯಾರ್ಥಿಗಳೂ ಸಹ ಪಾಲ್ಗೊಂಡಿದ್ದಾರೆ. ತುಳುವರಿಗೆ ತಮ್ಮ ಶ್ರೀಮಂತ ಸಂಸ್ಕೃತಿ ನೆನಪಿಸಿದರೆ ತುಳುವೇತರರಿಗೆ ಇಲ್ಲಿಯ ಸಂಸ್ಕೃತಿಯ ಮಹತ್ವ ಪರಿಚಯಿಸಲಿದೆ. ಮಾಹೆಯು ತುಳುವರು ಮತ್ತು ತುಳುವೇತರರ ನಡುವೆ ಸಾಂಸ್ಕೃತಿಕ ರಾಯಭಾರಿತ್ವದ ಕೆಲಸ ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ.
— ಡಾ. ಶರತ್ ಕೆ. ರಾವ್. ಮಾಹೆ ಕುಲಪತಿ.