ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುನೀಲ್ ಕೆ.ಆರ್. ಮಾತನಾಡಿದರು. ದಿನೇಶ್ ಮೆಂಡನ್, ಪುನೀತ್ ಅತ್ತಾವರ, ಪ್ರಸಾದ್ ಅಂಚನ್, ಹರೀಶ್, ರಾಜೇಶ್ ಉಚ್ಚಿಲ ಇದ್ದರು.
ದಕ್ಷಿಣ ಪ್ರಾಂತ ಪ್ರಮುಖ ಸುನೀಲ್ ಕೆ.ಆರ್. ಮಾಹಿತಿ
ಗೋ ರಕ್ಷಣಾ ಕಾಯಿದೆ ತಿದ್ದುಪಡಿ ಯತ್ನಕ್ಕೆ ವಿರೋಧ
ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರವು ಗೋಕಳ್ಳರಿಗೆ ಸಹಕರಿಸುವ ನೀತಿ ಜಾರಿಗೊಳಿಸಲು ಹುನ್ನಾರ ನಡೆಸುತ್ತಿದೆ. ರಾಜ್ಯದಲ್ಲಿರುವ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ-2020 ಸಡಿಲಗೊಳಿಸಿ ತಿದ್ದುಪಡಿ ತರಲು ಕ್ಯಾಬಿನೆಟ್ ಸಭೆಯಲ್ಲಿ ಅಂಗೀಕರಿಸಿದೆ. ಅದನ್ನು ವಿರೋಧಿಸಿ ಡಿ.8ರಂದು ವಿಶ್ವ ಹಿಂದು ಪರಿಷತ್ (ವಿಹಿಂಪ) ವತಿಯಿಂದ ರಾಜ್ಯವ್ಯಾಪಿ ಪ್ರತಿಭಟನೆ ನಡೆಯಲಿದೆ ಎಂದು ಉಡುಪಿ ಪ್ರಾಂತ ವಿಶ್ವ ಹಿಂದು ಪರಿಷತ್ನ ಗೋ ರಕ್ಷಾ ವಿಭಾಗದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ ಸುನೀಲ್ ಕೆ.ಆರ್. ತಿಳಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಡಿ.6) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 11 ಗಂಟೆಗೆ ಉಡುಪಿಯ ಜಟ್ಕಾ ಸ್ಟ್ಯಾಂಡ್ನಲ್ಲಿ ಪ್ರತಿಭಟಿಸುವ ಮೂಲಕ ರಾಜ್ಯ ಸರ್ಕಾರದ ಗೋ ರಕ್ಷಣಾ ವಿರೋಧಿ ನಿಲುವು ಖಂಡಿಸುತ್ತೇವೆ ಎಂದರು.
ಹಿಂದು ಭಾವನೆಗಳಿಗೆ ಅಡ್ಡಿ
ಸಿದ್ದರಾಮಯ್ಯ ಸರ್ಕಾರದ ಆಡಳಿತ ಆರಂಭವಾದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಹಿಂದು ಸಮಾಜಕ್ಕೆ ತೀವ್ರ ಕಿರುಕುಳ ಕೊಡುತ್ತಲೇ ಇದೆ. ಹಿಂದುಗಳಿಗೆ ಪೂಜನೀಯವಾದ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವಾಗ ಅಥವಾ ಹಿಂಸಾತ್ಮಕವಾಗಿ ಸಾಗಾಟ ಮಾಡಿರುವುದು ಸಾಬೀತಾದರೆ ಕಾಯಿದೆ ಪ್ರಕಾರ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಲಾಗುತ್ತಿತ್ತು. ಅದರಿಂದ ಲಕ್ಷಾಂತರ ಗೋವುಗಳ ಜೀವ ಉಳಿದಂತಾಗಿದೆ. ಆದರೀಗ, ಗೋ ಕಳ್ಳರಿಗೆ ಬ್ಯಾಂಕ್ ಗ್ಯಾರಂಟಿ ಕೊಡಲು ಕಷ್ಟವಾಗುತ್ತದೆ ಎಂದು ನೆಪ ಒಡ್ಡಿರುವ ಸರ್ಕಾರ, ಇಂಡೆಮಿನಿಟಿ ಬಾಂಡ್ ಕೊಟ್ಟರೆ ಸಾಕೆಂದು ತಿದ್ದುಪಡಿ ಮಾಡಿದೆ. ಅದನ್ನು ಡಿ.8ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿದೆ. ಜಿಹಾದಿಗಳು, ಗೋ ಕಳ್ಳರೊಂದಿಗೆ ನಾವಿದ್ದೇವೆ ಎಂದು ಪರೋಕ್ಷ ಸಂದೇಶ ನೀಡುತ್ತಿದ್ದಾರೆ ಎಂದು ಸುನೀಲ್ ಕೆ.ಆರ್. ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಭಜರಂಗದಳ ಮಂಗಳೂರಿನ ವಿಭಾಗ ಸಂಯೋಜಕ ಪುನೀತ್ ಅತ್ತಾವರ, ವಿಶ್ವ ಹಿಂದು ಪರಿಷತ್ನ ಗೋ ರಾ ದಕ್ಷಿಣದ ಜಿಲ್ಲಾ ಪ್ರಮುಖರಾದ ಪ್ರಸಾದ್ ಅಂಚನ್, ಹರೀಶ್, ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ರಾಜೇಶ್ ಉಚ್ಚಿಲ ಇದ್ದರು.
ದ್ವೇಷ ಭಾಷಣ ನೆಪದಲ್ಲಿ ಪ್ರಕರಣ
ಸಮಾಜದಲ್ಲಿ ನಡೆಯುತ್ತಿರುವ ಲವ್ ಜಿಹಾದ್, ಭಯೋತ್ಪಾದನೆ, ಕಸಾಯಿಖಾನೆ ಹಾಗೂ ಗೋ ಕಳ್ಳಸಾಗಾಟದ ವಿರುದ್ಧ ಮಾತನಾಡಿದರೆ ಅದು ದ್ವೇಷ ಭಾಷಣ ಎಂದು ಹಿಂದು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಈ ವಿಚಾರವಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವುದು ತಪ್ಪೇ? ಅಕ್ರಮ ಘಟನೆ, ದೇಶದ ವಿಚಾರ ಅಥವಾ ಹಿಂದುತ್ವದ ರಕ್ಷಣೆ ಕುರಿತು ಮಾತನಾಡಿದರೆ, ದುಷ್ಕರ್ಮಿಗಳಿಗೆ ಉಗ್ರ ಶಿಕ್ಷೆ ನೀಡಿ ಎಂದು ಸರ್ಕಾರವನ್ನು ಒತ್ತಾಯಿಸಿ ಮಾತನಾಡಿದರೆ ದ್ವೇಷ ಭಾಷಣ ಎನ್ನುತ್ತೀರಿ. ಬಾಂಡ್ ನೀಡಿದರೂ ಜಾಮೀನು ಸಿಗದ ಸಂದರ್ಭ ಬರುತ್ತಿದೆ. ಇದು ಅಲ್ಪಸಂಖ್ಯಾತರ ಓಲೈಕೆಗಾಗಿ ಮಾಡುತ್ತಿರುವ ಕಾರ್ಯವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ನಿಲುವಿನ ವಿರುದ್ಧವೂ ಸಹ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಸುನೀಲ್ ಕೆ.ಆರ್. ತಿಳಿಸಿದರು.