ಮಂಗಳೂರು ರಿಫೈನರಿ ಅಂಡ್​ ಪೆಟ್ರೋಕೆಮಿಕಲ್ಸ್​ ಲಿಮಿಟೆಡ್​ ಸಂಸ್ಥೆಯ ಜನರಲ್​ ಮ್ಯಾನೇಜರ್​ (ಮೆಟೀರಿಯಲ್ಸ್​) ಶರತ್​ ಬುದಾಳೆ ಮಾರಾಟಗಾರರ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿದರು.  
ಉಡುಪಿ

ಎಂಎಸ್​ಎಂಇಗಳು ಬೃಹತ್​ ಉದ್ಯಮದ ಬೆನ್ನೆಲುಬು: ಶರತ್​ ಬುದಾಳೆ

ಗೋಪಾಲಕೃಷ್ಣ ಪಾದೂರ್
ಉಡುಪಿ: ಎಂಎಸ್​ಎಂಇಗಳು ಬೃಹತ್​ ಉದ್ಯಮದ ಬೆನ್ನೆಲುಬು. ಉದ್ಯಮದ ಬೆಳವಣಿಗೆಗೆ ಎಂಎಸ್​ಎಂಇಗಳೇ ಅಡಿಪಾಯವಾಗಿದೆ. ಎಲ್ಲಾ ಉದ್ಯಮಗಳು ಎಂಎಸ್​ಎಂಇ ಮೇಲೆ ಅವಲಂಬಿತವಾಗಿವೆ. ವಿಶ್ವಾಸಾರ್ಹ ಪೂರೈಕೆದಾರರು ಅತೀ ಅಗತ್ಯವಾಗಿ ಬೇಕಾಗಿದ್ದಾರೆ ಎಂದು ಮಂಗಳೂರು ರಿಫೈನರಿ ಅಂಡ್​ ಪೆಟ್ರೋಕೆಮಿಕಲ್ಸ್​ ಲಿಮಿಟೆಡ್​ ಸಂಸ್ಥೆಯ ಜನರಲ್​ ಮ್ಯಾನೇಜರ್​ (ಮೆಟೀರಿಯಲ್ಸ್​) ಶರತ್​ ಬುದಾಳೆ ಎಸ್​. ಹೇಳಿದರು.

ಪುರಭವನದಲ್ಲಿ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಆಶ್ರಯದಲ್ಲಿ ನಡೆದ ಮಾರಾಟಗಾರರ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಎಂಆರ್​ಪಿಎಲ್​ 2025&26ನೇ ಸಾಲಿನಲ್ಲಿ ಒಟ್ಟು 1150 ಕೋಟಿ ರೂ. ಕಚ್ಚಾ ವಸ್ತುಗಳು ಹಾಗೂ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದೆ. ಎಸ್​ಟಿ ಎಸ್​ ಸಿ ಮಾಲೀಕತ್ವದ ಕಂಪೆನಿಗಳಿಗೆ 25 ಕೋಟಿ ರೂ. ಹಾಗೂ ಮಹಿಳಾ ಉದ್ಯಮಗಳಿಂದ 122 ಕೋಟಿ ರೂ. ಖರೀದಿ ಆದೇಶ ನೀಡಲಾಗಿತ್ತು. ಸಣ್ಣ ಬೃಹತ್​ ಉದ್ಯಮಗಳು ಅಗತ್ಯ ಸಾಮಗ್ರಿಗಳನ್ನು ಸ್ಥಳಿಯ ಪೂರೈಕೆದಾರರಿಂದ ಖರೀದಿಸಲು ಆಸಕ್ತಿವಹಿಸಿದ್ದು, ಇದರಿಂದ ಎಂಎಸ್​ಎಂಗಳಿಗೆ ಹೆಚ್ಚಿನ ಅವಕಾಶ ಲಭ್ಯವಾಗಿದೆ. ಸುತ್ತಮುತ್ತಲಿರುವ ಬೃಹತ್​ ಉದ್ಯಮಗಳ ಅಗತ್ಯಕ್ಕೆ ಅನುಗುಣವಾಗಿ ಎಂಎಸ್​ಎಂಇಗಳು ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿಕೊಳ್ಳುವ ಮೂಲಕ ಹೆಚ್ಚಿನ ವಹಿವಾಟು ನಡೆಸಬಹುದು. ಎಂಎಸ್​ಎಂಇ ಮತ್ತು ಕೈಗಾರಿಕೆಗಳು ಪಾಲುದಾರರೇ ಹೊರತು ಸ್ಪರ್ಧಿಗಳಲ್ಲ ಎಂದರು.
ಎಂಎಸ್​ಎಂಇ ಬೆಂಗಳೂರು ಡಿಎಫ್​ಒ ನಿರ್ದೇಶಕ ದೇವರಾಜ್​ ಕೆ. ಮಾತನಾಡಿ, ದೇಶದ ಉತ್ಪಾದನಾ ಕ್ಷೇತ್ರದಲ್ಲಿ ಎಂಎಸ್​ಎಂಇ ಕೊಡುಗೆ ಪಾಲು ಅಧಿಕವಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬಲವರ್ಧನೆಗೆ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಇತ್ತೀಚೆಗೆ ಜಾರಿಗೆ ಬಂದಿರುವ ನೂತನ ತಿದ್ದುಪಡಿ ಕಾಯ್ದೆ ಸಣ್ಣ ಉದ್ಯಮಿಗಳಿಗೆ ಹೆಚ್ಚಿನ ಬೆಂಬಲ ನೀಡಲಿದೆ. ಸಣ್ಣ ಉದ್ಯಮಿಗಳು ಆರಂಭಿಕ ಹಂತದ ಶ್ರಮ ವಹಿಸಿ ಜೆಮ್​ ಪೋರ್ಟಲ್​ನಲ್ಲಿ ನೋಂದಾಯಿಸಿಕೊಂಡರೆ, ಟೆಂಡರ್​ ಲಭ್ಯತೆ ಹೆಚ್ಚಿ ಉದ್ಯಮ ಅಭಿವೃದ್ಧಿಗೆ ದೊಡ್ಡ ವೇದಿಕೆ ಸಿಗಲಿದೆ.
ಗುಣಮಟ್ಟದ ಉತ್ಪಾದನೆಗಾಗಿ ಜಾರಿಯಲ್ಲಿರುವ 'ಲೀನ್​ ಮ್ಯಾನುಫ್ಯಾಕ್ಚರಿಂಗ್​' ಯೋಜನೆಯಡಿ ಕೇಂದ್ರ ಸರ್ಕಾರ ಶೇ. 90 ರಷ್ಟು ಧನಸಹಾಯ ನೀಡುತ್ತಿದೆ ಎಂದು ಹೇಳಿದರು.

ಕರಾವಳಿ ಭಾಗಕ್ಕೆ ರಕ್ಷಣಾ ವಲಯದಲ್ಲಿ ಅವಕಾಶ
ರಕ್ಷಣಾ ಉತ್ಪಾದನಾ ಇಲಾಖೆಯು ಸ್ವದೇಶಿ ಉತ್ಪಾದನೆಗೆ ಆದ್ಯತೆ ನೀಡುತ್ತಿದ್ದು, ಎಂಎಸ್​ಎಂಇಗಳಿಂದ 2,500ಕ್ಕೂ ಹೆಚ್ಚು ಬಿಡಿಭಾಗಗಳನ್ನು ಖರೀದಿಸಲು 'ಸೃಜನ್​' ಪೋರ್ಟಲ್​ನಲ್ಲಿ ಪಟ್ಟಿ ಮಾಡಲಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ಕರಾವಳಿ ಭಾಗದಲ್ಲಿ ರಕ್ಷಣಾ ವಲಯದ ಬಿಡಿಭಾಗಗಳನ್ನು ತಯಾರಿಸಿ ಪೂರೈಸಲು ದೊಡ್ಡ ಅವಕಾಶಗಳಿವೆ ಎಂದರು.

ಲೀಡ್​ ಬ್ಯಾಂಕ್​ ಜಿಲ್ಲಾ ವ್ಯವಸ್ಥಾಪಕ ಹರೀಶ್​ ಜಿ. ಮಾತನಾಡಿದರು. ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಸೀತಾರಾಮ ಶೆಟ್ಟಿ, ಜಿಲ್ಲಾ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ವಸಂತ ಕಿಣಿ, ಪವರ್​ ಸಂಸ್ಥೆ ಅಧ್ಯೆ ವೀಣಾ ಕುಡ್ವ ಉಪಸ್ಥಿತರಿದ್ದರು. ಎಂಎಸ್​ಎಂಇ ಮಂಗಳೂರು ಡಿಎಫ್​ಒ ಸಹಾಯಕ ನಿರ್ದೇಶಕ ಸುಂದರ ಶೇರಿಗಾರ್​ ಎಂ. ಸ್ವಾಗತಿಸಿ, ಸಹಾಯಕ ನಿರ್ದೇಶಕಿ ಸುಮನ್​ ಎಸ್​. ರಾಜು ನಿರೂಪಿಸಿ, ವಂದಿಸಿದರು.