ಉಡುಪಿಯ ಕಿನ್ನಿಮುಲ್ಕಿ-ಅಂಬಲಪಾಡಿ ಸರ್ವೀಸ್​ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ದುಸ್ತರ ಆಗಿರವುದು. ರಸ್ತೆ ಬದಿಯಲ್ಲೇ ಬೈಕ್​ ನಿಲ್ಲಿಸಿಟ್ಟಿರುವುದು. 
ಉಡುಪಿ

ಸರ್ವೀಸ್​ ರಸ್ತೆಯಲ್ಲಿ ಸಂಚಾರ ಸಂಕಟ

* ಉಡುಪಿ ಕಿನ್ನಿಮುಲ್ಕಿ-ಅಂಬಲಪಾಡಿ ರೋಡ್​ನಲ್ಲಿ ಕಿರಿಕಿರಿ

* ರಸ್ತೆಯ ಇಕ್ಕೆಲಗಳಲ್ಲಿ ಬೈಕ್​ ನಿಲ್ಲಿಸಿ ಸಾರ್ವಜನಿಕರಿಗೆ ಸಮಸ್ಯೆ

ಉಡುಪಿ: ಉಡುಪಿಯ ಕಿನ್ನಿಮುಲ್ಕಿಯಿಂದ ಅಂಬಲಪಾಡಿವರೆಗೆ ಇರುವ ಸರ್ವಿಸ್​ ರಸ್ತೆಯ ಒಂದು ಬದಿಯಲ್ಲಿ ಸಾಲಾಗಿ ಬೈಕ್​ಗಳನ್ನು ನಿಲ್ಲಿಸಲಾಗುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಇನ್ನಿತರ ವಾಹನಗಳಿಗೆ ತೀವ್ರ ತೊಂದರೆಯಾಗುತ್ತಿದೆ.
ಈ ಮಾರ್ಗದಲ್ಲಿ ಟ್ರಕ್​, ಕಂಟೇನರ್​ ಸಹಿತ ಭಾರೀ ವಾಹನಗಳ ಸಂಚಾರವೂ ಇದ್ದು, ಸರ್ವೀಸ್​ ರಸ್ತೆಯ ಬದಿಯಲ್ಲಿ ಬೈಕ್​ ನಿಲ್ಲಿಸುವುದರಿಂದ ದೊಡ್ಡ ವಾಹನಗಳಿಗೆ ಮುಂದೆ ಸಾಗಲು ಸಾಧ್ಯವಾಗದೆ ಅಲ್ಲಿಯೇ ಸಿಲುಕಿಕೊಳ್ಳುವಂತಾಗಿದೆ.

ದಿನವೂ ಸಂಚಾರ ಸಿಕ್ಕು

ಪ್ರತಿದಿನವೂ ಸಹ ಈ ಮಾರ್ಗದಲ್ಲಿ ಸಂಚಾರ ಸಿಕ್ಕು (ಟ್ರಾಫಿಕ್​ ಜಾಮ್​) ಆಗುವುದು ಸಾಮಾನ್ಯ ಎಂಬಂತಾಗಿದೆ. ಹೀಗಾಗಿ ಈ ರಸ್ತೆಯ ಮುಖಾಂತರ ದಿನವೂ ಕೆಲಸ ಕಾರ್ಯಗಳ ನಿಮಿತ್ತ ಹಾಗೂ ಉದ್ಯೋಗಕ್ಕೆ ಕಾರು ಇನ್ನಿತರ ವಾಹನಗಳಲ್ಲಿ ತೆರಳುವವರಿಗೆ ತೊಂದರೆ ಆಗುತ್ತಿದೆ. ಸಕಾಲಕ್ಕೆ ತಲುಪಬೇಕಾದ ಸ್ಥಳಕ್ಕೆ ಹೋಗಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಸೂಕ್ತ ಕ್ರಮಕ್ಕೆ ಜನರ ಆಗ್ರಹ

ಪ್ರತಿದಿನ ನಡೆಯುವ ಮೀನು ಮಾರುಕಟ್ಟೆಯ ಪ್ರವೇಶದ್ವಾರದ ಬಳಿಯೂ ಬೈಕ್​ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಈ ಮಾರ್ಗದಲ್ಲೂ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಸಾರ್ವಜನಿಕರ ಓಡಾಟಕ್ಕೂ ಸಮಸ್ಯೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಮಾರ್ಗದಲ್ಲಿ ಆಗುತ್ತಿರುವ ವಾಹನ ದಟ್ಟಣೆ ಕಡಿಮೆ ಮಾಡಬೇಕು. ಅಲ್ಲದೆ, ರಸ್ತೆಯ ಇಕ್ಕೆಲಗಳಲ್ಲಿ ಅಕ್ರಮವಾಗಿ ಬೈಕ್​ ನಿಲ್ಲಿಸಿ ಹೋಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.
"

ಉಡುಪಿಯ ಕಿನ್ನಿಮುಲ್ಕಿ-ಅಂಬಲಪಾಡಿ ಸರ್ವೀಸ್​ ರಸ್ತೆಯಲ್ಲಿ ಅಸಮರ್ಪಕವಾಗಿ ಬೈಕ್​ ನಿಲ್ಲಿಸುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿ ಬೈಕ್​ ನಿಲ್ಲಿಸದಂತೆ ಅಧಿಕಾರಿಗಳು, ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಈಗ ಉದ್ಭವಿಸಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಸಂಚಾರ ದಟ್ಟಣೆ ಆಗದಂತೆ ನಿಗಾ ವಹಿಸಬೇಕು.