ವೀರಕಂಭ ಗ್ರಾಮ ಪಂಚಾಯಿತಿಯ 2026-27 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಮಂಗಳವಾರ ನಡೆಯಿತು. ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್, ಪಿಡಿಒ ಶಂಭು ಕುವಾರ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ವೀರಕಂಭ ಗ್ರಾಮ ಪಂಚಾಯತಿಯ 2026-27 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ವೀರಕಂಬದ ಮಜಿಯಲ್ಲಿರುವ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರುಗಿತು.
ಪಂಚಾಯತಿ ವ್ಯಾಪ್ತಿಯ ಮಂಗಳಪದವು ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಯ ಬದಿಯಲ್ಲಿರುವ ಅಂಗಡಿ ಕಟ್ಟಡಗಳನ್ನು ಪಂಚಾಯತಿ ಸ್ವಾಧೀನಕ್ಕೆ ಪಡೆದುಕೊಳ್ಳುವ ಬಗ್ಗೆ, ವಸತಿ ಯೋಜನೆಯಡಿಯಲ್ಲಿ ಮಂಜೂರಾದ ನಿವೇಶನ, 94ಸಿ, 94ಸಿಸಿ ಅಡಿಯಲ್ಲಿ ಮಂಜೂರಾದ ನಿವೇಶನಗಳಲ್ಲಿರುವ ಮನೆಗಳ ದುರಸ್ತಿ ಅಥವಾ ನವೀಕರಣಕ್ಕೆ ಪಂಚಾಯತಿ ಹಂತದಲ್ಲಿ ಪರವಾನಗಿ ನೀಡಲು ಸಂಬಂಧಪಟ್ಟವರನ್ನು ಆಗ್ರಹಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಯಿತು. ಜತೆಗೆ ವೀರಕಂಭ ಗ್ರಾಮ ಪಂಚಾಯಿತಿ ಕಚೇರಿಗೆ ಸೂಕ್ತ ನಿವೇಶನ ಹಾಗೂ ಸಭಾಂಗಣ ಒಳಗೊಂಡ ಕಚೇರಿ ಕಟ್ಟಡಕ್ಕೆ ಅನುದಾನ ಮಂಜೂರು ವಾಡುವಂತೆ ಆಗ್ರಹಿಸಲು ತೀರ್ಮಾನಿಸಲಾಯಿತು.
ಗೋಳ್ತಮಜಲು ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಳ್ಳುತ್ತಿರುವ ಪಂಚಾಯಿತಿ ಕಾರ್ಯದರ್ಶಿ ಸವಿತಾ ಅವರನ್ನು ಗೌರವಿಸಲಾಯಿತು. ಅಧಿಕಾರಿಗಳು ತಮ್ಮಇಲಾಖೆ ಬಗ್ಗೆ ಮಾಹಿತಿ ಹಂಚಿಕೊಂಡರು.
ಬಂಟ್ವಾಳ ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ವೀರಕಂಬ ಗ್ರಾಮ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರು, ಆರೋಗ್ಯ ಸುರಕ್ಷಣಾಧಿಕಾರಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು. ಗ್ರಾಮಸ್ಥರು ತಮ್ಮ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು. ಸವಿತಾ ವರದಿ, ಲೆಕ್ಕಪತ್ರ ಮಂಡಿಸಿದರು. ವೀರಕಂಭ ಪಿಡಿಒ ಶಂಭು ಕುವಾರ ಶರ್ವಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಠಾಣೆ ವ್ಯಾಪ್ತಿ ಬದಲಾವಣೆಗೆ ವಿರೋಧ
ವೀರಕಂಭ ಗ್ರಾಮವು ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವುದರ ಜತೆಗೆ ಜನರಿಗೂ ಕಡಿಮೆ ಅವಧಿಯಲ್ಲಿ ಠಾಣೆಗೆ ತೆರಳಬಹುದು. ಆದರೆ ಸರ್ಕಾರದಿಂದ ಸಜಿಪಮುನ್ನೂರು ಹೊಸ ಪೊಲೀಸ್ ಠಾಣೆ ವ್ಯಾಪ್ತಿಗೆ ವೀರಕಂಭ ಸೇರಿಸುವ ಕುರಿತು ಆದೇಶವಾಗಿದ್ದು, ವೀರಕಂಭ ಪ್ರದೇಶವನ್ನು ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ ಉಳಿಸಿಕೊಳ್ಳುವಂತೆ ಸಂಬಂಧಿತರನ್ನು ಆಗ್ರಹಿಸಲು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.