ಸೋಮೇಶ್ವರ ಪುರಸಭೆಯ 2026-27ನೇ ಸಾಲಿನ ಆಯವ್ಯಯ ಪ್ರತಿ ಪ್ರದರ್ಶಿಸಿದ ಸದಸ್ಯರು. ಪುರಸಭೆಯ ಅಧ್ಯಕ್ಷೆ ಕಮಲ, ಉಪಾಧ್ಯಕ್ಷ ರವಿಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ಪೌರಾಯುಕ್ತ ಮತ್ತಡಿ ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸೋಮೇಶ್ವರ ಪುರಸಭೆಯ 2026-27ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ಮಂಡನಾ ಸಭೆ ಬುಧವಾರ ಅಧ್ಯಕ್ಷೆ ಕಮಲ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಾಲಿನ ಒಟ್ಟು ಬಜೆಟ್ ಗಾತ್ರವು 15.06 ಕೋಟಿ ರೂಪಾಯಿಗಳಾಗಿದ್ದು, ಕಳೆದ ಸಾಲಿಗಿಂತ 11.05 ಲಕ್ಷ ರೂಪಾಯಿಗಳಷ್ಟು ಉಳಿತಾಯದ ಆಯವ್ಯಯವನ್ನು ಅಕೌಂಟೆಂಟ್ ಪ್ರೀತಿ ಮಂಡಿಸಿದರು.
ಪುರಸಭೆಯ ಸ್ವಂತ ಸಂಪನ್ಮೂಲಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಬಾರಿ ಸ್ವಯಂಘೋಷಿತ ಆಸ್ತಿ ತೆರಿಗೆ ಪರಿಷ್ಕರಣೆ ಹಾಗೂ ಸರ್ಕಾರದ ವಿವಿಧ ಅನುದಾನಗಳ ಮೂಲಕ ಒಟ್ಟು 5.23 ಕೋಟಿ ರೂಪಾಯಿಗಳ ಆದಾಯದ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಆದಾಯ ಹೆಚ್ಚಳಕ್ಕೆ ಪೂರಕವಾಗಿ ಪುರಸಭೆಯು ಬೀಚ್ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದು, ಈ ಮೂಲಕ ಅಂಗಡಿ ಮಳಿಗೆಗಳ ಬಾಡಿಗೆ ಹಾಗೂ ಜಾಹೀರಾತುಗಳಿಂದ 3 ಲಕ್ಷ ರೂಪಾಯಿಗಳ ಸಂಗ್ರಹದ ಗುರಿ ಹೊಂದಿದೆ. ಕಳೆದ ಸಾಲಿನಲ್ಲಿ ವಾಣಿಜ್ಯ ಮಳಿಗೆಗಳ ತೆರಿಗೆ ಮತ್ತು ಉದ್ದಿಮೆ ಪರವಾನಗಿಯಿಂದ 31.66 ಲಕ್ಷ ರೂ. ವಸೂಲಾಗಿದ್ದು, ಈ ಬಾರಿ ಅದನ್ನು 60.75 ಲಕ್ಷ ರೂಪಾಯಿಗಳಿಗೆ ಏರಿಸುವ ಮಹತ್ವಾಕಾಂಕ್ಷಿ ಗುರಿ ಹಾಕಿಕೊಳ್ಳಲಾಗಿದೆ. 2026-27ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 1.50 ಕೋಟಿ ರೂ., ನೀರು ಸರಬರಾಜಿನಿಂದ 48 ಲಕ್ಷ ರೂ., ಘನತ್ಯಾಜ್ಯ ವಸ್ತು ವಿಲೇವಾರಿಯಿಂದ 46 ಲಕ್ಷ ರೂ. ಹಾಗೂ ಸುಮಾರು 5 ಸಾವಿರ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಮೂಲಕ 1.50 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಉಪಾಧ್ಯಕ್ಷ ರವಿಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ಪೌರಾಯುಕ್ತ ಮತ್ತಡಿ ಸೇರಿದಂತೆ ಪುರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಬಜೆಟ್ ಚರ್ಚೆಯ ವೇಳೆ ಆಸ್ತಿ ತೆರಿಗೆ ವಸೂಲಾತಿಯಲ್ಲಿನ ಗೊಂದಲಗಳ ಕುರಿತು ಸದಸ್ಯ ಸಲಾಂ ಆಕ್ಷೇಪ ವ್ಯಕ್ತಪಡಿಸಿದರು. ಒಟ್ಟು 8 ಸಾವಿರ ಮನೆಗಳಿಂದ 2.45 ಕೋಟಿ ರೂ. ತೆರಿಗೆ ಬರಬೇಕಿದ್ದರೂ ಕೇವಲ 1.25 ಕೋಟಿ ರೂ. ಮಾತ್ರ ವಸೂಲಾಗಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಉತ್ತರಿಸಿದ ಪೌರಾಯುಕ್ತ ಮತ್ತಡಿ ಅವರು, ಈ ಕುರಿತು ಪೂರ್ಣ ಪ್ರಮಾಣದ ಲೆಕ್ಕಾಚಾರವನ್ನು ಮುಂದಿನ ಸಭೆಯಲ್ಲಿ ಮಂಡಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಉಪಾಧ್ಯಕ್ಷ ರವಿಶಂಕರ್ ಮಾತನಾಡಿ, ಎಸ್‌ಐಆರ್ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಸೋಮೇಶ್ವರ ಪುರಸಭೆಯು ಹಿಂದುಳಿದಿರುವುದು ವಿಷಾದನೀಯ ಸಂಗತಿ ಎಂದರು. ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಎಲ್ಲ ಸದಸ್ಯರು ಮುತುವರ್ಜಿ ವಹಿಸಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಸರ್ಕಾರದಿಂದ ನಿರೀಕ್ಷೆ
ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರದ ಅನುದಾನದ ಮೇಲೆ ಹೆಚ್ಚಿನ ಅವಲಂಬನೆ ಇರಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 2.05 ಕೋಟಿ ರೂ., ಘನತ್ಯಾಜ್ಯ ವಸ್ತು ನಿರ್ವಹಣೆಗೆ 3.15 ಕೋಟಿ ರೂ. ಹಾಗೂ ಜನಗಣತಿ ಯೋಜನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಒಟ್ಟು 9.83 ಕೋಟಿ ರೂಪಾಯಿಗಳ ಅನುದಾನ ನಿರೀಕ್ಷಿಸಲಾಗಿದೆ. ಇದರೊಂದಿಗೆ ಎಸ್‌ಎಫ್‌ಸಿ ಮುಕ್ತನಿಧಿ, ವೇತನ ಅನುದಾನ ಹಾಗೂ ವಿದ್ಯುಚ್ಛಕ್ತಿ ಅನುದಾನಗಳಿಗೂ ಹಣ ಮೀಸಲಿಡಲಾಗಿದೆ.