ಉಡುಪಿಯ ಬಾಲಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಅನುರಾಧಾ ಹಾದಿಮನಿ ಉದ್ಘಾಟಿಸಿದರು. ಅರುಣ್ ಪಟವರ್ಧನ್, ಪ್ರತಿಮಾ ಇದ್ದರು.
* ಮಹಿಳೆಯರಿಗೆ ಅನುರಾಧಾ ಹಾದಿಮನಿ ಸಲಹೆ
* ಉಡುಪಿಯಲ್ಲಿ ಮಾಹಿತಿ ಕಾರ್ಯಾಗಾರ ಉದ್ಘಾಟನೆ
ಉಡುಪಿ: ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಜಂಟಿಯಾಗಿ ಅನೇಕ ತರಬೇತಿ ಹಮ್ಮಿಕೊಳ್ಳುತ್ತಿದೆ. ಜಿಲ್ಲೆಯ ಮಹಿಳೆಯರು ಇದರ ಪ್ರಯೋಜನ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅನುರಾಧಾ ಹಾದಿಮನಿ ಸಲಹೆ ನೀಡಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಬಾಲಭವನದಲ್ಲಿ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಮಣಿಪಾಲದ ವತಿಯಿಂದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಇಲಾಖೆಯ ವಿವಿಧ ವಿಭಾಗಗಳ ಮೇಲ್ವಿಚಾರಕಿಯರಿಗೆ ಬುಧವಾರ (ಜೂ.10) ಆಯೋಜಿಸಿದ್ದ ಸೌರಶಕ್ತಿ, ಸಾವಯವ ಕೃಷಿ, ಎರೆಹುಳು ಗೊಬ್ಬರ ತಯಾರಿಕೆ, ಯೋಗ ಮತ್ತು ವರದಕ್ಷಿಣೆ ನಿಷೇಧ ಕಾಯಿದೆ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸೌರಶಕ್ತಿ, ಕೃಷಿಯ ಮಾಹಿತಿ
ಅರುಣ್ ಪಟವರ್ಧನ್ ಮತ್ತು ಪ್ರವೀಣ್ ಅವರು ಸೌರಶಕ್ತಿ ಮತ್ತು ಜೀವನೋಪಾಯ ಸೌರ ಉಪಕರಣಗಳ ಬಗ್ಗೆ, ಸಾವಯವ ಕೃಷಿಕ ಗೋಪಾಲ ನಾಯಕ ಸಾವಯವ ಕೃಷಿ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಕುರಿತು ಉಪನ್ಯಾಸ ನೀಡಿದರು. ಯೋಗದ ಮಹತ್ವ ಹಾಗೂ ಅದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಪ್ರಕಾಶ್ ನಾಯಕ್ ಪ್ರಾತ್ಯಕ್ಷಿಕೆ ನೀಡಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರು, ಸಖಿ ಒನ್ ಸ್ಟಾಫ್ ಕೇಂದ್ರದ ಸಿಬ್ಬಂದಿ, ಸಾಂತ್ವನ ಕೇಂದ್ರದ ಸಿಬ್ಬಂದಿ, ಬಾಲಭವನದ ಸಿಬ್ಬಂದಿ ಮತ್ತು ಯೋಜನಾ ಸಿಬ್ಬಂದಿ ಪಾಲ್ಗೊಂಡಿದ್ದರು.
ಭಾರತೀಯ ವಿಕಾಸ ಟ್ರಸ್ಟ್ನ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ದೀಪಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.