ಕೋಟ ಗ್ರಾಪಂ ವ್ಯಾಪ್ತಿಯ ಮೂಡುಗಿಳಿಯಾರು ಆಚಾರ್‌ಒಳಲು ವಾರಾಹಿ ವಾಂಟೆಡ್ ಡ್ಯಾಂ ಹಲಗೆ ತೆಗೆದಿರುವುದು.
ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಳಿಯಾರು ಮತ್ತು ಮೂಡುಗಿಳಿಯಾರು ಭಾಗಕ್ಕೆ ಹರಿಯಲ್ಪಡುವ ವಾರಾಹಿ ನೀರಿಗೆ ಕಿಡಿಗೇಡಿಗಳಿಂದ ಸಂಚಾಕಾರ ಎದುರಾಗಿದೆ. ಕುಂದಾಪುರ ತಾಲೂಕಿನ ಮೂಲಕ ಬ್ರಹ್ಮಾವರ ತಾಲೂಕಿನ ಕೋಟ ಗ್ರಾಪಂ ವ್ಯಾಪ್ತಿಗೆ ಬೇಸಿಗೆಯ ಬರ ನೀಗಿಸುವ ವಾರಾಹಿ ನೀರು ಬನ್ನಾಡಿ ಹೊಳೆಗೆ ಸೇರಲ್ಪಡುತ್ತಿದೆ.
ಬೇಸಿಗೆಯಲ್ಲಿ ಮೂಡುಗಿಳಿಯಾರು ಭಾಗದ ವ್ಯಾಪ್ತಿಗೆ ಹಲವು ವರ್ಷಗಳಿಂದ ಬೇಳೂರು ಹಾಗೂ ವಡ್ಡರ್ಸೆ ಗ್ರಾಪಂ ವ್ಯಾಪ್ತಿಯ ಮೂಲಕ ನೀರು ಹರಿಯುತ್ತಿದ್ದು, ವಡ್ಡರ್ಸೆ ಗ್ರಾಪಂ ವ್ಯಾಪ್ತಿಯ ಯಾಳಹಕ್ಲು ಭಾಗದ ಮೂಲಕ ಮೂಡುಗಿಳಿಯಾರು ವ್ಯಾಪ್ತಿಗೆ ಹೊಳೆ ಅಥವಾ ತೋಡುಗಳ ಮೂಲಕ ನೀರು ತಲುಪುತ್ತಿದೆ. ಆದರೆ ಕಿಡಿಗೇಡಿಗಳ ಕೃತ್ಯದಿಂದಾಗಿ ನೀರು ಪೋಲಾಗುತ್ತಿದ್ದು, ಕೋಟ ಪಂಚಾಯಿತಿ ವ್ಯಾಪ್ತಿಯ ಗಿಳಿಯಾರು ಮತ್ತು ಮೂಡುಗಿಳಿಯಾರು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇದರ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
*ಅಂತರ್ಜಲಮಟ್ಟ ಕುಸಿತ: ಬೇಸಿಗೆಯಲ್ಲಿ ಅಂತರ್ಜಲಮಟ್ಟ ಕುಸಿತದಿಂದ ಕೋಟ ಪಂಚಾಯಿತಿ ವ್ಯಾಪ್ತಿಯ ಬಾವಿಯಲ್ಲಿ ನೀರಿನ ಮಟ್ಟ ದಯನೀಯ ಸ್ಥಿತಿ ತಲುಪಿದೆ. ಕೆಲ ವರ್ಷಗಳಿಂದ ವಾರಾಹಿ ನೀರು ಸರಾಗವಾಗಿ ಹರಿಯುತ್ತಿರುವುದರಿಂದ ಗ್ರಾಮೀಣ ಹಳ್ಳಿ ಭಾಗವಾದ ಮೂಡುಗಿಳಿಯಾರಿನ ಪರಿಸರದ ಜನರಲ್ಲಿ ವಾರಾಹಿ ಜೀವರಕ್ಷೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಮೂಡುಗಿಳಿಯಾರು ಭಾಗದ ಜೀವನಾಡಿ ವಾರಾಹಿ ನೀರು ಯಾಳಹಕ್ಲು ಭಾಗದಿಂದ ಮೂಡುಗಿಳಿಯಾರು ವ್ಯಾಪ್ತಿಯ ಆಚಾರ್ ಒಳಲು ವೆಂಟೆಡ್ ಡ್ಯಾಂನಲ್ಲಿ ಶೇಖರಣೆಯಾಗುತ್ತಿದ್ದು, ಇಲ್ಲಿ ಅಳವಡಿಸಲಾದ ಮರದ ಹಲಗೆಯನ್ನು ಕಿಡಿಗೇಡಿಗಳು ತೆರವುಗೊಳಿಸುತ್ತಿದ್ದಾರೆ. ಇದರಿಂದ ಮೂಡುಗಿಳಿಯಾರು ಭಾಗಕ್ಕೆ ತಲುಪಬೇಕಿದ್ದ ನೀರು ಪೂರ್ಣ ಪ್ರಮಾಣದಲ್ಲಿ ಪೋಲಾಗಿ ಬನ್ನಾಡಿ ಹೊಳೆ ಸೇರುತ್ತಿದೆ.
ವಾರಾಹಿ ನೀರು ಸಾಕಷ್ಟು ವರ್ಷಗಳಿಂದ ಮೂಡುಗಿಳಿಯಾರಿನ ಜೀವನಾಡಿಯಾಗಿದೆ. ಆದರೆ ಪ್ರತಿವರ್ಷ ಬೇರೆ ಬೇರೆ ಭಾಗದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇದಕ್ಕೆ ಸಂಬಂಧಿಸಿ ಇಲಾಖೆ ಕಠಿಣ ಕ್ರಮ ಕಗೊಳ್ಳಬೇಕು. ಡ್ಯಾಂಗೆ ಅಳವಡಿಸಿದ ಮರದ ಹಲಗೆ ಶೀಘ್ರವಾಗಿ ಮರು ಜೋಡಿಸಿ ಅಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು.
ಸ್ಥಳ ಪರಿಶೀಲನೆ ನಡೆಸಿದ್ದೇವೆ. ಎರಡು ಬಾರಿ ಹಲಗೆ ತೆಗೆದು ಸಮಸ್ಯೆ ಉಂಟು ಮಾಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲಿ ಹಲಗೆ ಜೋಡಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಪಂಚಾಯಿತಿಯಿಂದ ಸಿಸಿ ಟಿವಿ ಕ್ಯಾಮರಾ ಅಳವಡಿಸಿ ಸೂಕ್ತ ಕಣ್ಗಾವಲು ಇರಿಸಲಾಗುವುದು.