ಉಡುಪಿಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಸಭೆ ನಡೆಸಿದರು. ರಾಜೇಂದ್ರ ಪ್ರಸಾದ್ ಪಾಠಕ್, ಮಾರುತಿ, ಡಾ. ಚಿದಾನಂದ ಸಂಜು, ಡಾ.ರೋಶನ್ ಶೆಟ್ಟಿ ಇದ್ದರು.
* ಯಶಸ್ವಿಗೊಳಿಸಲು ಎಡಿಸಿ ಗದ್ಯಾಳ್ ಸೂಚನೆ
* ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ
ಉಡುಪಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ವತಿಯಿಂದ 'ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್-2026' ರ್ಯಾಲಿ ಫೆ.18ರಂದು ಜಿಲ್ಲೆಯಲ್ಲಿ ಸಂಚರಿಸಲಿದೆ. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅಧಿಕಾರಿಗಳಿಗೆ ಸೂಚಿಸಿದರು.
ಸಿಐಎಸ್ಎಫ್ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ ರ್ಯಾಲಿ ನಿಮಿತ್ತ ಉಡುಪಿಯ ತಮ್ಮ ಕಚೇರಿಯಲ್ಲಿ ಮಂಗಳವಾರ (ಫೆ.10) ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
6,500 ಕಿಮೀ ರ್ಯಾಲಿ
ವಂದೇ ಮಾತರಂ ಗೀತೆಗೆ 150 ವರ್ಷವಾದ ಹಿನ್ನೆಲೆಯಲ್ಲಿ ಸಿಐಎಸ್ಎಫ್ ವತಿಯಿಂದ ಈ ಜಾಥಾ ಆಯೋಜಿಸಲಾಗಿದೆ. ದೇಶದ ಪಶ್ಚಿಮ ಸಮುದ್ರ ತೀರದಲ್ಲಿ ಕರಾವಳಿ ಸಮುದಾಯಗಳು, ಸಂಸ್ಕೃತಿ ಮತ್ತು ರಾಷ್ಟ್ರೀಯ ಸಂಕಲ್ಪ ಒಗ್ಗೂಡಿಸುವ ಉದ್ದೇಶದಿಂದ ಕೋಸ್ಟಲ್ ಸೈಕ್ಲೋಥಾನ್ ಸ್ಪರ್ಧೆ ಆಯೋಜಿಸಲಾಗಿದೆ. ಈಗಾಗಲೇ ಜನವರಿಯಲ್ಲಿ ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಗಿದೆ. ರ್ಯಾಲಿಯು ಸುಮಾರು 6,500 ಕಿಮೀ ಸಂಚರಿಸಲಿದ್ದು, ಕೇರಳದ ಕೊಚ್ಚಿಯಲ್ಲಿ ಫೆ.21ರಂದು ಕೊನೆಗೊಳ್ಳಲಿದೆ ಎಂದರು.
ಸಭೆಯಲ್ಲಿ ಎನ್ಎಂಪಿಎ ಮಂಗಳೂರು ಸೆಂಟ್ರಲ್ ಇಂಡಸ್ಟ್ರೀಯಲ್ ಫೋರ್ಸ್ನ ರಾಜೇಂದ್ರ ಪ್ರಸಾದ್ ಪಾಠಕ್, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ ಇತರರು ಉಪಸ್ಥಿತರಿದ್ದರು.
ಮೂರು ಕಡೆ ವಿದ್ಯಾರ್ಥಿಗಳೊಂದಿಗೆ ಸಂವಾದ
ಜಿಲ್ಲೆಯಲ್ಲಿ ರ್ಯಾಲಿಯು ಬೈಂದೂರು ತಾಲೂಕಿನ ಶಿರೂರಿನಿಂದ ಪ್ರಾರಂಭವಾಗಿ ಕುಂದಾಪುರ-, ಬ್ರಹ್ಮಾವರ, ಉಡುಪಿ, ಕಾಪು, ಹೆಜಮಾಡಿ ಮಾರ್ಗವಾಗಿ ಮುಂದೆ ಸಾಗಲಿದೆ. ಸ್ಪರ್ಧಾಳುಗಳನ್ನು ಸ್ಥಳೀಯ ಸಂಪ್ರದಾಯದೊಂದಿಗೆ ಅಂದು ಬೆಳಗ್ಗೆ 8:30ಕ್ಕೆ ತ್ರಾಸಿಯಲ್ಲಿ ರ್ಯಾಲಿ ಸ್ವಾಗತಿಸಲಿದ್ದು, ಅಲ್ಲಿ ವಿದ್ಯಾರ್ಥಿಗಳೊಂದಿಗೆ ಹಾಗೂ ಸಮುದಾಯದ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 11:30ಕ್ಕೆ ಬ್ರಹ್ಮಾವರದ ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಹಾಗೂ ಮಧ್ಯಾಹ್ನ 3:30ಕ್ಕೆ ಕಾಪು ತಾಲೂಕು ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಎಡಿಸಿ ಗದ್ಯಾಳ್ ಮಾಹಿತಿ ನೀಡಿದರು.
ರ್ಯಾಲಿ ಸುಗಮವಾಗಿ ಸಾಗಲು, ಸೈಕ್ಲಿಸ್ಟ್, ಅವರ ಸಿಬ್ಬಂದಿಗೆ ಸುರಕ್ಷತೆ ಒದಗಿಸಲು ಹಾಗೂ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನಾನುಕೂಲ ಆಗದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಸಿಬ್ಬಂದಿ ಒಳಗೊಂಡ ಆಂಬುಲೆನ್ಸ್ಗಳನ್ನು ನಿಗದಿತ ಸ್ಥಳಗಳಲ್ಲಿ ನಿಯೋಜಿಸಬೇಕು.