ಕರ್ನಾಟಕದ ಕರಾವಳಿ ಭಾಗಕ್ಕೆ 'ವಂದೇ ಭಾರತ್​' ರೈಲು ಸೌಲಭ್ಯ ನೀಡುವಂತೆ ಒತ್ತಾಯಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಚಿವ ಅಶ್ವಿನಿ ವೈಷ್ಣವ್​ ಅವರಿಗೆ ದೆಹಲಿಯಲ್ಲಿ ಮನವಿ ಸಲ್ಲಿಸಿದರು. 
ಉಡುಪಿ

ಕರಾವಳಿ ಭಾಗಕ್ಕೆ ಓಡಿಸಿ 'ವಂದೇ ಭಾರತ್​' ರೈಲು

* ಕೇಂದ್ರ ಸಚಿವರಿಗೆ ಸಂಸದ ಕೋಟ ಮನವಿ
ಉಡುಪಿ: ಕರ್ನಾಟಕದ ಕರಾವಳಿ ಭಾಗದ ರೈಲ್ವೆ ಪ್ರಯಾಣಿಕರ ಹಿತದೃಷ್ಟಿಯಿಂದ ಬಹುನಿರೀಕ್ಷೆಯ ಬೆಂಗಳೂರು, ಮಂಗಳೂರು ಉಡುಪಿ, ಕಾರವಾರ ಮಾರ್ಗದಲ್ಲಿ 'ವಂದೇ ಭಾರತ್​' ಎಕ್ಸ್​ಪ್ರೆಸ್​ ರೈಲು ಸೌಲಭ್ಯವನ್ನು ತ್ವರಿತವಾಗಿ ನೀಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರಿಗೆ ಶುಕ್ರವಾರ (ಡಿ.12) ಮನವಿ ನೀಡಿದರು.
ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಅವರು, ಕರಾವಳಿ ಭಾಗದಲ್ಲಿ 'ವಂದೇ ಭಾರತ್​' ರೈಲ್ವೆಯ ಅವಶ್ಯಕತೆ ವಿವರಿಸಿದರು.
ಹಾಸನ, ಸಕಲೇಶಪುರ ಭಾಗದಲ್ಲಿ ವಿದ್ಯುದೀಕರಣ ಬಹುತೇಕ ಮುಗಿದಿದ್ದು, ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳನ್ನು ವಂದೇ ಭಾರತ್​ ರೈಲ್ವೆಯ ಮೂಲಕ ಬೆಸೆಯಲು ಇದು ಸಕಾಲವಾಗಿದೆ. ಕಾರವಾರ, ಉಡುಪಿ, ಮಂಗಳೂರು ಪ್ರಯಾಣಿಕರಿಗೆ ಉತ್ತಮ ರೈಲ್ವೆ ಸೇವೆ ಒದಗಿಸಲು ಇದು ಸೂಕ್ತ ಅವಕಾಶವಾಗಿದೆ ಎಂದು ವಿನಂತಿಸಿದರು.
ಮನವಿ ಸ್ವೀಕರಿಸಿ ಸ್ಪಂದಿಸಿದ ಸಚಿವ ಅಶ್ವಿನಿ ವೈಷ್ಣವ್​, ಘಾಟಿ ಭಾಗದಲ್ಲಿ ವಿದ್ಯುದೀಕರಣ ಪೂರ್ಣಗೊಂಡ ನಂತರ ಬೆಂಗಳೂರಿನಿಂದ ಕಾರವಾರದವರೆಗಿನ ರೈಲ್ವೆ ಸೇವೆ ಉತ್ತಮಗೊಳಿಸಿ 'ವಂದೇ ಭಾರತ್​' ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಕೋಟ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.