ವಂದೇ ಭಾರತ್​ ರೈಲು ಸಂಚಾರದಲ್ಲಿ ಆಗುತ್ತಿರುವ ವಿಳಂಬ ಸರಿಪಡಿಸುವಂತೆ ರೈಲ್ವೆ ಮಂಡಳಿಯ ಸದಸ್ಯ ಡಾ. ಮನೋಜ ಸಿಂಗ್​ ಅವರಿಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ ಪತ್ರ ಸಲ್ಲಿಸಿದರು. 
ಉಡುಪಿ

ವಂದೇ ಭಾರತ್​ ವೇಗ ಹೆಚ್ಚಿಸಿ; ಸಮಯ ಉಳಿಸಿ

* ರೈಲ್ವೆ ಮಂಡಳಿಗೆ ಸಂಸದ ಕೋಟ ಪೂಜಾರಿ ಮನವಿ

ಉಡುಪಿ: ಹೊಸದಾಗಿ ಆರಂಭಗೊಂಡ ಬೆಂಗಳೂರು-ಮಂಗಳೂರು-ಕಾರವಾರ- ಹಾಗೂ ಮಡಗಾಂವ್​ ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್​ ರೈಲ್​ನ ವೇಗವನ್ನು ಸಾಧ್ಯವಿರುವ ಕಡೆಗಳಲ್ಲಿ ಹೆಚ್ಚಿಸಬೇಕು. ಅದರಿಂದ ಸುಮಾರು 2 ಗಂಟೆಗಳ ಕಾಲ ಪ್ರಯಾಣಿಕರಿಗೆ ಸಮಯ ಉಳಿಯಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಪತ್ರ ಸಲ್ಲಿಸಿದರು.

ದೆಹಲಿಯಲ್ಲಿ ರೈಲ್ವೆ ಮಂಡಳಿಯ ಸದಸ್ಯ (ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ) ಡಾ. ಮನೋಜ ಸಿಂಗ್​ ಅವರನ್ನು ಭೇಟಿಯಾಗಿ ಮಾತನಾಡಿದರು.

ಘಾಟಿ ಪ್ರದೇಶ ಹೊರತಾಗಿ ಇತರೆಡೆಯೂ ರೈಲು ಸಂಚಾರದಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ರೈಲ್ವೆ ಸಮಯವನ್ನು ನಿಯಮಾನುಸಾರ ವೇಗಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಪ್ರಸ್ತುತವಾಗಿ ವಂದೇ ಭಾರತ್​ ಪ್ರಯಾಣದ ಸಮಯ 13 ಗಂಟೆ ಆಗುತ್ತಿದೆ. ಆಗುತ್ತಿರುವ ವ್ಯರ್ಥ ಸಮಯವನ್ನು ಸರಿದೂಗಿಸಿದರೆ ಬೆಂಗಳೂರಿನಿಂದ ಮಡಗಾಂವ್​ಗೆ 11 ಗಂಟೆಯಲ್ಲಿ ತಲುಪಲು ಸಾಧ್ಯವಿದೆ ಎಂದು ಮನವರಿಕೆ ಮಾಡಿದರು.

ವಂದೇ ಭಾರತ್​ ರೈಲು ಪ್ರಯಾಣಿಕರನ್ನು ಆಕರ್ಷಿಸುತ್ತಿದ್ದು ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪ್ರಯಾಣದ ವೇಳೆ ಕಡಿಮೆಯಾದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.