ಉಡುಪಿಯಲ್ಲಿ ನಡೆದ ವನಸುಮ ಜೆಸಿ ಸಪ್ತಾಹದ ಸಮಾರೋಪದಲ್ಲಿ ಎಂ.ಎಸ್. ಭಟ್ ಹಾಗೂ ರೋಹಿತ್ ಬೈಕಾಡಿ ಅವರಿಗೆ 'ಮನಸುಮ ರಂಗ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ.ರಘುಪತಿ ಭಟ್, ಪೂರ್ಣಿಮಾ, ಪಲ್ಲವಿ ಕೊಡಗು, ಬಾಸುಮ ಕೊಡಗು, ಡಾ. ವಿಜಯೇಂದ್ರ ವಸಂತ್, ಜಯಕುಮಾರ್ ಇತರರಿದ್ದರು.
* ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಆಶಯ
* ವನಸುಮ ಜೆಸಿ ಸಪ್ತಾಹದ ಸಮಾರೋಪ
ಉಡುಪಿ: ಸಮಾಜಮುಖಿ ಚಟುವಟಿಕೆ, ಸಮಾಜಸೇವೆಯಂತಹ ಕಾರ್ಯಗಳಲ್ಲಿ ಯುವಸಮುದಾಯ ತೊಡಗಿಕೊಳ್ಳುವ ಅಗತ್ಯತೆ ಇಂದು ಹೆಚ್ಚಿದೆ. ಜೆಸಿಯಂತಹ ಸಂಸ್ಥೆಗಳ ಮೂಲಕ ಯುವಜನತೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜೆಸಿಐ ಉಡುಪಿ ಸಿಟಿ, ವನಸುಮ ವೇದಿಕೆ ಮತ್ತು ವನಸುಮ ಟ್ರಸ್ಟ್ ಸಹಯೋಗದಲ್ಲಿ ವಾರಗಳ ಕಾಲ ನಡೆದ ವನಸುಮ ಜೆಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮನಸುಮ ರಂಗ ಪ್ರಶಸ್ತಿ ಪ್ರದಾನ
ಖ್ಯಾತ ರಂಗನಟ ಎಂ.ಎಸ್. ಭಟ್ ಅವರಿಗೆ 'ವನಸುಮ ರಂಗ ಸಮ್ಮಾನ್' ಮತ್ತು ಯುವ ರಂಗ ನಿರ್ದೇಶಕ ರೋಹಿತ್ ಬೈಕಾಡಿ ಅವರಿಗೆ 'ರಂಗ ಪುರಸ್ಕಾರ' ಪ್ರಶಸ್ತಿಯನ್ನು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರದಾನ ಮಾಡಿದರು.
ಡೆಂಟಾ ಕೇರ್ನ ಡಾ. ವಿಜಯೇಂದ್ರ ವಸಂತ್, ಎಂಪೈರ್ ಎಂಟರ್ಟೈನ್ಮೆಂಟ್ನ ಜಯಕುಮಾರ್ ಪೂಜಾರಿ ಶುಭ ಹಾರೈಸಿದರು. ಜೆಸಿಐ ಅಧ್ಯಕ್ಷೆ ಪಲ್ಲವಿ ಕೊಡಗು ಅಧ್ಯಕ್ಷತೆ ವಹಿಸಿದ್ದರು.
ಜೆಸಿಐ ಉಡುಪಿ ಸಿಟಿಯ ಪೂರ್ವ ಅಧ್ಯಕ್ಷರು ಹಾಗೂ ವನಸುಮ ವೇದಿಕೆಯ ಹಿರಿಯ ಸದಸ್ಯರು ಉಪಸ್ಥಿತರಿದ್ದರು. ಸಪ್ತಾಹದ ನಿರ್ದೇಶಕ ಮತ್ತು ವನಸುಮ ಟ್ರಸ್ಟ್ನ ಅಧ್ಯಕ್ಷ, ಹಿರಿಯ ಕಲಾವಿದ ಬಾಸುಮ ಕೊಡಗು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಅನ್ಯೋನ್ಯ ದಂಪತಿ ಸ್ಪರ್ಧೆ
ಸಪ್ತಾಹದ ನಿಮಿತ್ತ ಆಯೋಜಿಸಿದ್ದ ಅನ್ಯೋನ್ಯ ದಂಪತಿ ಸ್ಪರ್ಧೆಯಲ್ಲಿ ಶೃುತಿ-ಪ್ರದೀಪ್ ದಂಪತಿ ಪ್ರಥಮ ಸ್ಥಾನದೊಂದಿಗೆ 30 ಸಾವಿರ ರೂ. ಬಹುಮಾನ ಗಳಿಸಿದರು. ಜ್ಞಾನಶೀಲಾ-ಶ್ರೀನಿವಾಸ ದಂಪತಿ 20 ಸಾವಿರ ರೂ.ನೊಂದಿಗೆ ದ್ವಿತೀಯ, ಅನುಪಲ್ಲವಿ-ರೋಹಿತ್ ದಂಪತಿ 10 ಸಾವಿರ ರೂ.ನೊಂದಿಗೆ ತೃತೀಯ ಬಹುಮಾನ ಗಳಿಸಿದರು. ಸ್ಪರ್ಧೆಯಲ್ಲಿ 30 ದಂಪತಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ಕಾವ್ಯವಾಣಿ ಕೊಡಗು ಹಾಗೂ ಜಯರಾಮ್ ಸಹಕರಿಸಿದರು. ಸಪ್ತಾಹದಲ್ಲಿ ನಡೆದಿದ್ದ ನಾಟಕ, ಗೊಂಬೆ ಯಕ್ಷಗಾನ, ಜಾದೂ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು.