ಉಡುಪಿ ಮಲ್ಪೆಯ ತೊಟ್ಟಂ ಚರ್ಚ್ ಪರಿಸರದಲ್ಲಿ ವನಮಹೋತ್ಸವ ಆಚರಿಸಲಾಯಿತು. ಹೆನ್ರಿ ಮಸ್ಕರೇನ್ಹಸ್, ಲೆಸ್ಲಿ ಅರೋಜಾ, ರೋಬಿ ಗ್ಯಾಬ್ರಿಯೇಲ್ ಫೆರ್ನಾಂಡಿಸ್, ಲವೀನಾ ಫೆರ್ನಾಂಡಿಸ್, ಶಾಂತಿ ಫೆರ್ನಾಂಡಿಸ್, ಆರ್ಥರ್ ವಾಜ್ ಇತರರಿದ್ದರು.
* ಫಾ. ಹೆನ್ರಿ ಮಸ್ಕರೇನ್ಹಸ್ ಅಭಿಪ್ರಾಯ
* ತೊಟ್ಟಂ ಚರ್ಚ್ ಪರಿಸರದಲ್ಲಿ ವನಮಹೋತ್ಸವ
ಉಡುಪಿ: ದೇವರು ಸೃಷ್ಟಿಸಿದ ಪ್ರಕೃತಿಯನ್ನು ಪ್ರೀತಿಸಿ, ಮರಗಳನ್ನು ಮಕ್ಕಳಂತೆ ಪೋಷಿಸಬೇಕು. ಶುದ್ಧ ಗಾಳಿ, ಹಣ್ಣು, ನೆರಳು ಹಾಗೂ ಪರಿಸರ ಸಮತೋಲನ ನೀಡಿ ಎಲ್ಲ ಜೀವಿಗಳ ಬದುಕಿಗೆ ಅಮೂಲ್ಯ ಕೊಡುಗೆ ನೀಡುತ್ತವೆ. ಹೀಗಾಗಿ ಪ್ರಕೃತಿ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಮಲ್ಪೆ ತೊಟ್ಟಂನ ಸಂತ ಆನ್ನಮ್ಮ ಚರ್ಚ್ನ ಫಾ. ಹೆನ್ರಿ ಮಸ್ಕರೇನ್ಹಸ್ ಅಭಿಪ್ರಾಯಪಟ್ಟರು.
ಕಥೊಲಿಕ್ ಸಭಾ ಉಡುಪಿ ಪ್ರದೇಶ (ರಿ.) ತೊಟ್ಟಂ ಘಟಕ, ಸಂತ ಅನ್ನಮ್ಮ ಚರ್ಚ್ ಪರಿಸರ ಆಯೋಗದ ಆಶ್ರಯದಲ್ಲಿ ಭಾನುವಾರ (ಜು.5) ಆಯೋಜಿಸಿದ್ದ 'ಲೌದಾತೋ ಸಿ ದಿನ್' ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಥೊಲಿಕ್ ಸಭಾ ತೊಟ್ಟಂ ಘಟಕವು ಬಂಗನಪಳ್ಳಿ ತಳಿಯ 60 ಮಾವಿನ ಗಿಡಗಳನ್ನು ಖರೀದಿಸಿದ್ದು ಯೋಜನೆಯಂತೆ ಅದನ್ನು ಚರ್ಚ್ನ 12 ವಾರ್ಡ್ಗಳ ಮುಖ್ಯಸ್ಥರಿಗೆ ತಲಾ 5 ಗಿಡ ವಿತರಿಸಲಾಯಿತು. ಕೆಥೊಲಿಕ್ ಸಭಾ ಹಾಗೂ ಚರ್ಚ್ ಪಾಲನಾ ಮಂಡಳಿಯ ಪದಾಧಿಕಾರಿಗಳು ಎಲ್ಲ ವಾರ್ಡ್ಗಳಿಗೆ ಭೇಟಿ ನೀಡಿ, ಆಯ್ಕೆಗೊಂಡವರ ಮನೆಗಳ ಜಾಗದಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.
ಕೆಥೊಲಿಕ್ ಸಭಾ ತೊಟ್ಟಂ ಘಟಕದ ಅಧ್ಯಕ್ಷ ರೋಬಿ ಗ್ಯಾಬ್ರಿಯೇಲ್ ಫೆರ್ನಾಂಡಿಸ್, ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್, 21 ಆಯೋಗಗಳ ಸಂಯೋಜಕಿ ಶಾಂತಿ ಫೆರ್ನಾಂಡಿಸ್, ಪರಿಸರ ಆಯೋಗದ ಸಂಯೋಜಕ ಆರ್ಥರ್ ವಾಜ್, ವಾರ್ಡ್ ಮುಖ್ಯಸ್ಥರು ಹಾಗೂ ಸಮುದಾಯದವರು ಪಾಲ್ಗೊಂಡಿದ್ದರು.
"
ಇದು ಒಂದು ವರ್ಷದ ಕಾರ್ಯಕ್ರಮವಲ್ಲ. ಪರಿಸರ ಸಂರಕ್ಷಣೆಗಾಗಿ ಐದು ವರ್ಷದ ಯೋಜನೆ. ಪ್ರತಿವರ್ಷ ಗಿಡಗಳ ಬೆಳವಣಿಗೆ ಹಾಗೂ ನಿರ್ವಹಣೆಯ ಮೌಲ್ಯಮಾಪನ ಮಾಡಿ ಅತ್ಯುತ್ತಮವಾಗಿ ಗಿಡ ಬೆಳೆಸಿದ ವಾರ್ಡ್ಗೆ ಬಹುಮಾನ ನೀಡಲಾಗುವುದು. ಮುಂದಿನ ಐದು ವರ್ಷದ ಅವಧಿಯಲ್ಲಿ ತೊಟ್ಟಂ ಧರ್ಮಕೇಂದ್ರದ ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ಹಣ್ಣಿನ ಗಿಡ ವಿತರಿಸಲಾಗುವುದು.
— ಲೆಸ್ಲಿ ಅರೋಜಾ. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ.