ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ಸುನಿಲ್ ಸ್ವಾಗತಿಸಿದರು.
ಉಡುಪಿ: ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಾರ್ಕಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲಾಗುವುದು. ಮುಂಬರುವ ಬಜೆಟ್ನಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದರು. ಒಳ ಮೀಸಲಾತಿ ಕಾರಣದಿಂದ ಆಯ್ಕೆ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿತ್ತು, ಆದರೆ ಈಗ ಚಾಲನೆ ನೀಡಲಾಗಿದೆ ಎಂದರು.
ಅನೆದಾಳಿ ತಡೆಗೆ ಬ್ಯಾರಿಕೇಡ್ ನಿಮಾರ್ಣ
ಚಿಕ್ಕಮಗಳೂರಿನಲ್ಲಿ ಅನೆ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅನೆ, ಚಿರತೆ ಮತ್ತು ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮಾನವ ವನ್ಯಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ವನ್ಯಜಿವಿಗಳು ಜನಪ್ರದೇಶಗಳಿಗೆ ಬರದಂತೆ ಕಾಡಂಚಿನ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಯಾರಿಕೇಡ್ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಶಿವಮೊಗ್ಗ ವಿದ್ಯಾರ್ಥಿ ಹತ್ಯೆ ಹಾಗೂ ಅಪ್ರಾಪ್ತರಲ್ಲಿ ಗಾಂಜಾ ಸೇವೆನೆ ವ್ಯಾಪಕವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ನಿಗ್ರಹಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.
ಅಜೀಂಪ್ರೇಂಜಿ ವಿವಿಯ ಮೇಲೆ ಎಬಿವಿಪಿ ವಿದ್ಯಾರ್ಥಿಗಳು ದಾಂಧಲೆ ನಡೆಸಿರುವ ಬಗ್ಗೆ ಉತ್ತರಿಸಿ, ಯಾವುದೇ ಸಂಘಟನೆಗಳು ಕಾನೂನು ವಿರುದ್ಧವಾಗಿ ನಡೆದುಕೊಂಡಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ಯಾರಂಟಿಗಳ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52,000 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಆದರೂ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲಾಗುತ್ತಿದೆ. ಈಗಾಗಲೇ 1.20 ಲಕ್ಷ ಕೋಟಿ ರೂ. ವಿವಿಧ ಯೋಜನೆಗಳಿಗೆ ನೀಡಲಾಗಿದೆ ಎಂದರು.
ಆಗುಂಬೆ ಸುರಂಗ ಮಾರ್ಗ ನಿಮಾರ್ಣಕ್ಕೆ ಅನುಮತಿ ನೀಡಲಾಗುವುದೇ ಎಂಬುದಕ್ಕೆ ಉತ್ತರಿಸಿ, ಪರಿಸರವಾದಿಗಳೊಂದಿಗೆ ಚರ್ಚಿಸಿ, ಅವರನ್ನು ಮನವೊಲಿಸಿ ಯೋಜನೆಯನ್ನು ಕಾರ್ಯಗತಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಕಾರ್ಕಾಳದಲ್ಲಿ ಪರುಶರಾಮ ಥೀಂ ಪಾರ್ಕ್ ನಿಮಾರ್ಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಥೀಮ್ ಪಾರ್ಕ್ ಬಗ್ಗೆ ತನಿಖೆ ನಡೆಯುತ್ತಿದೆ. ಮುಂದೆ ಥೀಂ ಪಾರ್ಕ್ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಹೊಸ ಶಾಸಕರು ಸಚಿವರಾಗಲು ಬಯಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಶಾಸಕರು ಸಚಿವರಾಗಲು ಬಯಸುವುದು ತಪ್ಪಲ್ಲ. ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿ ಪದವಿ ನೀಡಬಾರದು ಎಂಬ ರ್ನಿಣಯವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಮುನಿಯಾಲು ಉದಯ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.