ಹಿರ್ಗಾನ ಲಕ್ಷ್ಮೀಪುರದ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಬಿ.ಸದಾಶಿವ ಪ್ರಭು ಎಳ್ಳಾರೆ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು. ಪ್ರಮುಖರಾದ ಅಣ್ಣಾ ವಿನಯಚಂದ್ರ, ಡಾ.ಪಾಂಡುರಂಗ ನಾಯಕ್, ಎಂ.ಎನ್.ನಾಯಕ್, ವಾಸುದೇವ ಕೃಷ್ಣ ನಾಯಕ್ ಭೈರಂಪಳ್ಳಿ, ಅಶೋಕ್ ನಾಯಕ್ ಉಪಸ್ಥಿತರಿದ್ದರು.  
ಉಡುಪಿ

ಸಮಾಜದ ಉನ್ನತಿಗೆ ಅನುಭವ, ಜ್ಞಾನ ಬಳಕೆ

ಕಾರ್ಕಳ: ಸದಾಶಿವ ಪ್ರಭು ತಮ್ಮ ಜೀವನವನ್ನು ಆದರ್ಶಮಯವಾಗಿ ರೂಪಿಸಿಕೊಂಡು ಆಡಳಿತ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ಎಂದರೆ ಸೇವೆಯಿಂದ ಬಿಡುಗಡೆಯಲ್ಲ. ಅದು ಸೇವೆಯ ಸ್ವರೂಪದಲ್ಲಿನ ಬದಲಾವಣೆ. ಇಷ್ಟು ವರ್ಷ ದೇಶ ಹಾಗೂ ಸಮಾಜಕ್ಕಾಗಿ ದುಡಿದಿರುವ ಅವರು ತಮ್ಮ ಅನುಭವ ಮತ್ತು ಜ್ಞಾನವನ್ನು ಮುಂದಿನ ದಿನಗಳಲ್ಲಿ ಸಮಾಜದ ಉನ್ನತಿಗಾಗಿ ಬಳಸಲಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಹೇಳಿದರು.
ಹಿರ್ಗಾನ ಲಕ್ಷ್ಮೀಪುರದ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಾನುವಾರ ಭಾರತೀಯ ಆಡಳಿತ ಸೇವೆ(ಐಎಎಸ್) ಅಧಿಕಾರಿಯಾಗಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕರಾಗಿ ಹಾಗೂ ಕೆಎಸ್‌ಎಫ್‌ಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಸದಾಶಿವ ಪ್ರಭು ಎಳ್ಳಾರೆ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ಮಾತನಾಡಿದರು. ಉದ್ಯಮಿ ಎಂ.ಎನ್.ನಾಯಕ್, ವಾಸುದೇವ ಕೃಷ್ಣ ನಾಯಕ್ ಭೈರಂಪಳ್ಳಿ, ಮಾಜಿ ಮೊಕ್ತೇಸರ ಅಶೋಕ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ನಿತ್ಯಾನಂದ ನಾಯಕ್ ಹಾಗೂ ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಭುವನೇಶ್ ಪ್ರಭು, ಪತ್ರಕರ್ತ ಪುಂಡಲಿಕ ಮರಾಠೆ ಮತ್ತು ಎಂ.ಡಿ.ಪ್ರಭು ಸನ್ಮಾನ ಪತ್ರ ವಾಚಿಸಿದರು.

ಬಿರುದು ಪ್ರದಾನ, ಉಪನ್ಯಾಸ

ಬೆಂಗಳೂರು ಸಪ್ತಪದಿ ವಿವಾಹ ಕೇಂದ್ರ ವತಿಯಿಂದ ಸದಾಶಿವ ಪ್ರಭು ಅವರಿಗೆ ಸಾರಸ್ವತ ಭಾರ್ಗವ ಬಿರುದು ಪ್ರದಾನ ಮಾಡಲಾಯಿತು. ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಅಂಗವಾಗಿ ‘ಶಕ್ತಿಯುತ ವ್ಯಕ್ತಿಯ ಹಿಂದೆ, ಶಕ್ತಿಯುತ ಮನಸ್ಸು’ ವಿಷಯದ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಬೆಂಗಳೂರಿನ ಗ್ರೇಸ್ ಅಕಾಡೆಮಿ ಜೀವನ್ ವಿಜ್ಞಾನ ತರಬೇತುದಾರ ಸುಬ್ರಹ್ಮಣ್ಯ ಕುಳೇದು ಉಪನ್ಯಾಸ ನೀಡಿದರು.