ಬೆಹರೇನ್ನ ವಾಣಿಜ್ಯ ಕಟ್ಟಡ ಹಾಗೂ 'ಜುಫೇರ್ ಎರಾ ಟವರ್'ಗೆ ಡ್ರೋಣ್ ಕ್ಷಿಪಣಿ ಮೂಲಕ ದಾಳಿ ನಡೆಸಿದ ಇರಾನ್.
* ದುಬೈ, ಬೆಹರೇನ್ ರಾಷ್ಟ್ರಗಳಲ್ಲಿ ಕ್ಷಿಪಣಿ ಭಯ
* ಸಾವಿರಾರು ಕನ್ನಡಿಗರಿಗೆ ಕ್ಷಣಕ್ಷಣವೂ ಅಪಾಯ
ಉಡುಪಿ: ರಹಸ್ಯ ಅಣ್ವಸ್ತ್ರ ಕಾರ್ಯಾಚರಣೆ ನಡೆಸುತ್ತಿದ್ದ ಇರಾನ್ ದೇಶದ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದೇಶ ಜಂಟಿ ಸಮರ ಮುಂದುವರಿದಿದ್ದು, ಇರಾನ್ ಸಹ ಪ್ರತಿದಾಳಿ ನಡೆಸುತ್ತಿದೆ. ಮೂರು ದೇಶಗಳ ನಡುವಿನ ಯುದ್ಧದ ಪ್ರಭಾವ ಹಾಗೂ ಭೀಕರತೆ ಮಧ್ಯಪ್ರಾಚ್ಯ ದೇಶಗಳಿಗೂ ತಟ್ಟಿದೆ. ಯುಎಇ (ದುಬೈ), ಬೆಹರೇನ್ ರಾಷ್ಟ್ರವೂ ಸಹ ಯುದ್ಧಪೀಡಿತವಾಗಿದ್ದು, ನಿವಾಸಿಗರು ಹಾಗೂ ಅನಿವಾಸಿಗರು ಜೀವಾತಂಕದಲ್ಲಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ ಅಮೆರಿಕದ ನೇವಿ ಹಾಗೂ ಸೇನಾ ನೆಲೆಗಳ ಮೇಲೆ ಶುಕ್ರವಾರ ಇರಾನ್ ದೇಶ ಕ್ಷಿಪಣಿ ದಾಳಿ ನಡೆಸಿದೆ. ಅಮೆರಿಕ ಹಾಗೂ ಇಸ್ರೇಲ್ ದಾಳಿ ನಿಲ್ಲಸದೇ ಇರುವ ಕಾರಣದಿಂದ ಇರಾನ್ ದೇಶವು ಮಧ್ಯಪ್ರಾಚ್ಯ ರಾಷ್ಟ್ರಗಳ ವಾಣಿಜ್ಯ ಕಟ್ಟಡ, ಹೋಟೆಲ್ಸ್, ವಿಮಾನ ನಿಲ್ದಾಣಗಳ ಮೇಲೆಯೂ ಕ್ಷಿಪಣಿ ದಾಳಿ ಮುಂದುವರಿಸಿದೆ. ಸಾವು-ನೋವುಗಳ ಸಂಖ್ಯೆ ಹೆಚ್ಚತೊಡಗಿದೆ.
ತವರಿಗೆ ಬರಲಾಗದ ಸ್ಥಿತಿ
ನೇರ ಯುದ್ಧ ನಡೆಯುತ್ತಿರುವ ದೇಶ ಹಾಗೂ ಯುದ್ಧಪಿಡಿತ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ತವರಿಗೆ ಬರಲಾಗದ ಸ್ಥಿತಿ ಉಂಟಾಗಿದೆ. ತಾವು ವಾಸ್ತವ್ಯ ಮಾಡಿರುವ ಕಟ್ಟಡದ ಮೇಲೆ ಯಾವ ಸಮಯದಲ್ಲಿ ಶತ್ರು ದೇಶದ ಕ್ಷಿಪಣಿ ಬೀಳುವುದೋ ಎಂಬ ಆತಂಕದಲ್ಲಿ ಮನೆಯೊಳಗೇ ಬಂಧಿಯಾಗಿದ್ದಾರೆ. ವಿಮಾನ ನಿಲ್ದಾಣಗಳ ಮೇಲೆಯೂ ದಾಳಿ ನಡೆಯುತ್ತಿದ್ದು, ವಿಮಾನಯಾನ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ.
ಹೊರ ಬರದಂತೆ ಸೂಚನೆ
ಬೆಹರೇನ್ನಲ್ಲಿರುವ ಅಮೆರಿಕದ ಸೇನಾ ನೆಲೆಗೆ ಹಾಗೂ ಇನ್ನಿತರ ಕಡೆಗಳಲ್ಲಿ ಇರಾನ್ನಿಂದ ಕ್ಷಿಪಣಿ ದಾಳಿ ಮುಂದುವರಿದಿರುವುದರಿಂದ ದುಬೈ ಸರ್ಕಾರ ತನ್ನ ಪ್ರಜೆಗಳಿಗೆ ಹಾಗೂ ಅನಿವಾಸಿ ಪ್ರವಾಸಿಗರಿಗೆ ಮನೆಯಿಂದ ಎರಡು ದಿನ ಹೊರ ಬರದಂತೆ ಸೂಚನೆ ನೀಡಿದೆ. ಅಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಎಲ್ಲ ಕ್ಷೇತ್ರಗಳ ವಹಿವಾಟು ಸ್ಥಗಿತಗೊಂಡಿದೆ. ಭಾನುವಾರ ಬೆಳಗ್ಗೆಯೂ ಸಹ ಬೆಹರೇನ್ನಲ್ಲಿ ಶತ್ರು ದೇಶದ ದಾಳಿ ಮುಂದುವರಿದಿತ್ತು.
ನಾನು ಮೆಕ್ಯಾನಿಕಲ್ ಇಂಜಿನಿರ್ ಆಗಿದ್ದು ಅಬುದಾಬಿಯ ಘಾಷಾ ದ್ವೀಪದಲ್ಲಿ ನೆಲೆಸಿದ್ದೇನೆ. ಇಲ್ಲಿ ಸದ್ಯ ಯಾವುದೇ ಆತಂಕ ಇಲ್ಲ. ಆಹಾರಕ್ಕೂ ತೊಂದರೆ ಆಗಿಲ್ಲ. ಇಲ್ಲಿನ ಸರ್ಕಾರ ಆಗಾಗ ಅರ್ಲಟ್ ಮಾಡುತ್ತಿದ್ದು, ಅವರ ಆದೇಶ ಪಾಲಿಸುತ್ತಿದ್ದೇವೆ. ಕಿಟಿಕಿ, ಬಾಗಿಲು ಬಳಿ ನಿಲ್ಲದಂತೆ, ಹೊರಾಂಗಣಕ್ಕೆ ಬರದಂತೆ ಅಥವಾ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯುವಂತೆ ತಿಳಿಸಲಾಗಿದೆ. ಆಗಾಗ ನೀಡುವ ಸಲಹೆಯನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಫೋನ್ನಲ್ಲೇ ಕೇಳಿಸಿತು ಬಾಂಬ್ ಬ್ಲಾಸ್ಟ್ನ ಸದ್ದು!
ಯುದ್ಧಪಿಡಿತ ಬೆಹರೇನ್ನಲ್ಲಿ ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ಅಲ್ಲಿ ನೆಲೆಸಿರುವ ಉದ್ಯಮಿ, ಅನಿವಾಸಿ ಭಾರತೀಯರ ವೇದಿಕೆ ಕರ್ನಾಟಕ ಸಮಿತಿಯ ಅಧ್ಯಕ್ಷರಾದ ಉಡುಪಿಯ ರಾಜಕುಮಾರ್ ಅಂಬಲಪಾಡಿ ಅವರಿಗೆ ಶನಿವಾರ ಸಂಜೆ 5 ಗಂಟೆಗೆ 'ವಿಜಯವಾಣಿ' ವಾಟ್ಸಾಪ್ ಕರೆ ಮಾಡಿತ್ತು. ಅವರೊಂದಿಗೆ ಮಾತನಾಡುತ್ತಿರುವಾಗಲೇ ಮೂರು ಬಾರಿ ಢಂ ಢಂ ಢಂ ಎಂಬ ಸದ್ದು ಕೇಳಿಸಿತು. ಸರ್.. ಕೇಳಿಸಿತಾ ಸದ್ದು? ಇಲ್ಲೇ ಸಮೀಪದಲ್ಲಿ ಆದ ಬಾಂಬ್ ಸ್ಫೋಟದ ಸದ್ದು ಅದು. ಅಮೆರಿಕದ ವಿರುದ್ಧ ಇರಾನ್ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದು ನೇವಲ್ ಬೇಸ್ಗೂ ದಾಳಿ ಮಾಡಿದೆ. ಇದೀಗ ಮಧ್ಯದಲ್ಲಿ ಇರುವ ರಾಷ್ಟ್ರಗಳೂ ಪರಿತಪಿಸುವಂತಾಗಿದೆ. ಏರ್ಪೋರ್ಟ್ ಬಂದ್ ಆಗಿದ್ದರಿಂದ ಊರಿಗೆ ತೆರಳಲೂ ಆಗುತ್ತಿಲ್ಲ.ಆದಷ್ಟು ಬೇಗ ಯುದ್ಧ ನಿಂತರೆ ಸಾಕು ಎಂದರು.
ಬೆಹರೇನ್ನಲ್ಲಿ ಯುದ್ಧಾತಂಕ ಮುಂದುವರಿದಿದೆ. ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಇಲ್ಲಿನ ಎಲ್ಲ ಜನರ ಫೋನ್ಗಳನ್ನು ಟ್ರೇಸ್ ಮಾಡಲಾಗುತ್ತಿದ್ದು, ಯಾವುದೇ ಮಾಹಿತಿ ಶೇರ್ ಮಾಡುವಂತಿಲ್ಲ. ಮಾಡಿದರೆ ಸುಲಭವಾಗಿ ಪತ್ತೆ ಮಾಡುವ ವ್ಯವಸ್ಥೆ ಇಲ್ಲಿದೆ. ಸದ್ಯ ಯಾವುದೇ ತೊಂದರೆ ಇಲ್ಲ. ಆದರೆ, ಆತಂಕ ಇದ್ದೇ ಇದೆ.
ಬೆಹರೇನ್ನಲ್ಲಿ ಕರ್ನಾಟಕದ 25 ಸಾವಿರಕ್ಕೂ ಅಧಿಕ ಜನರಿದ್ದು, ಕರಾವಳಿ ಭಾಗದ 10 ಸಾವಿರಕ್ಕೂ ಹೆಚ್ಚು ಜನ ನೆಲೆಸಿದ್ದಾರೆ. ಇರಾನ್ ದಾಳಿ ಮುಂದುವರಿದಿದ್ದು ಇಲ್ಲಿರುವ ಎಲ್ಲರೂ ಭಯದಲ್ಲೇ ಇರುವಂತಾಗಿದೆ. ಅಮೆರಿಕದ ಸೇನಾ ನೆಲೆಗಳಿಗೆ ದಾಳಿ ಮಾಡಿದ್ದ ಇರಾನ್, ಇದೀಗ ಡ್ರೋಣ್ ಕ್ಷಿಪಣಿ ಮೂಲಕ ವಾಣಿಜ್ಯ ಕಟ್ಟಡಗಳಿಗೂ ದಾಳಿ ನಡೆಸುತ್ತಿದ್ದು, ನಿನ್ನೆ ರಾತ್ರಿ ಜುಫೇರ್ ಎರಾ ಟವರ್ ಹಾನಿಗೊಂಡಿದೆ. ಸದ್ಯಕ್ಕೆ ರಾಯಭಾರಿ ಕಚೇರಿಯಿಂದ ಜನರಿಗೆ ಸೂಕ್ತ ಮಾಹಿತಿ ಮಾರ್ಗದರ್ಶನ ಲಭಿಸುತ್ತಿದೆ.