ಉಡುಪಿಯಲ್ಲಿ ನವ ಚೈತನ್ಯ ಯುವಕ ಮಂಡಲದ ವಾರ್ಷಿಕೋತ್ಸವದ ನಿಮಿತ್ತ ಡಾ. ತಲ್ಲೂರು ಶಿವರಾಂ ಶೆಟ್ಟಿ ಅವರಿಗೆ 'ವಜ್ರ ಚೈತನ್ಯ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈಶಪ್ರಿಯಶ್ರೀ, ಕೆ.ರಘುಪತಿ ಭಟ್​, ಜಿತೇಶ್​, ಗಿರಿಜಾ ಶಿವರಾಂ ಶೆಟ್ಟಿ, ಅನಿತಾ ಡಿಸೋಜಾ, ವಿಪಿನ್​, ವಿಶಾಲ್​ ಇದ್ದರು. 
ಉಡುಪಿ

ಸಂಘ-ಸಂಸ್ಥೆಗಳಿಂದಾಗಲಿ ಸಮಾಜದ ಉನ್ನತಿ

ಅದಮಾರು ಈಶಪ್ರಿಯ ತೀರ್ಥ ಶ್ರೀಪಾದರ ಆಶಯ

ನವ ಚೈತನ್ಯ ಯುವಕ ಮಂಡಲದ ವಾರ್ಷಿಕೋತ್ಸವ

ಉಡುಪಿ: ಸಜ್ಜನರಿಗೆ ಗೌರವಾದರ ಲಭಿಸುತ್ತಿದೆ ಎಂದಾದರೆ ಅಂತಹ ಸಂಘಗಳು ಉತ್ತಮ ಕಾರ್ಯ ಮಾಡುತ್ತಿವೆ ಎಂದರ್ಥ. ಸಂಘ-ಸಂಸ್ಥೆಗಳಿಂದ ಉತ್ತಮ ಕಾರ್ಯ ನಡೆದಾಗ ಅದು ಸಮಾಜದ ಉನ್ನತಿಗೆ ಕಾರಣವಾಗುತ್ತದೆ. ನವ ಚೈತನ್ಯ ಯುವಕ ಮಂಡಲದ 40ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವುದು ದೊಡ್ಡ ಸಾಧನೆಯೇ ಸರಿ ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಮೂಡುಪೆರಂಪಳ್ಳಿಯ ವಿಶ್ವಪ್ರಿಯ ಬಯಲು ರಂಗಮಂಟಪದಲ್ಲಿ ಆಯೋಜಿಸಿದ್ದ ನವ ಚೈತನ್ಯ ಯುವಕ ಮಂಡಲದ 40ನೇ ವಾರ್ಷಿಕೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಹೆಸರಿಗೆ ತಕ್ಕಂತೆ ಚೈತನ್ಯ

ಮಾಜಿ ಶಾಸಕ ಕೆ.ರಘುಪತಿ ಭಟ್​ ಮಾತನಾಡಿ, ಮೂಡುಪೆರಂಪಳ್ಳಿ ಯುವಕ ಮಂಡಲ ಹೆಸರಿಗೆ ತಕ್ಕಂತೆ ನವ ಚೈತನ್ಯದಿಂದ ಬೆಳೆಯುತ್ತಿದೆ. ಸಂಘದ ಕಾರ್ಯಗಳು ಸಮಾಜಮುಖಿಯಾಗಿದೆ. ಹೀಗಾಗಿಯೇ ಸಂಕ್ಕೆ 5 ಸೆಂಟ್ಸ್​ ಜಾಗ ಕೇಳಿದಾಗ ಅದಮಾರು ಶ್ರೀಗಳು 42 ಸೆಂಟ್ಸ್​ ಜಾಗ ನೀಡಿ ಔದಾರ್ಯ ತೋರಿದ್ದಾರೆ ಎಂದರು.

'ವಜ್ರ ಚೈತನ್ಯ' ಪ್ರಶಸ್ತಿ ಪ್ರದಾನ

ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಸಂಘದ ವತಿಯಿಂದ 'ವಜ್ರ ಚೈತನ್ಯ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮುಳುಗುತಜ್ಞ ಈಶ್ವರ್​ ಮಲ್ಪೆ, ಸಂಗೀತ ಸಾಧಕಿ ಲಿಯೋನಾ ಒಲಿವೆರಾ, ಸಂಸ್ಥೆಯಲ್ಲಿ ನಿರಂತರ ಸೇವೆ ಸಲ್ಲಿಸಿದ ಹಿರಿಯ ಸದಸ್ಯ ಸುರೇಂದ್ರ ಪೂಜಾರಿ ಮತ್ತು ರವೀಂದ್ರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ನವ ಚೈತನ್ಯ ಯುವಕ ಮಂಡಲದ ಅಧ್ಯಕ್ಷ ಜಿತೇಶ್​ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಪ್ರಸಾದ್​ ರಾಜ್​ ಕಾಂಚನ್​, ಗಿರಿಜಾ ಶಿವರಾಂ ಶೆಟ್ಟಿ, ನಗರಸಭಾ ಮಾಜಿ ಸದಸ್ಯೆ ಅನಿತಾ ಡಿಸೋಜಾ, ಸಂಸ್ಥೆಯ ಉಪಾಧ್ಯಕ್ಷ ವಿಪಿನ್​, ಕಾರ್ಯದರ್ಶಿ ವಿಶಾಲ್​, ಕೋಶಾಧಿಕಾರಿ ಶಂಕರ್​ ಕುಲಾಲ್​ ಪೆರಂಪಳ್ಳಿ ಉಪಸ್ಥಿತರಿದ್ದರು.
"

ನವ ಚೈತನ್ಯ ಯುವಕ ಮಂಡಳಿಯ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಇತರ ಸಂಘಗಳಿಗೂ ಮಾದರಿಯಾಗಿವೆ. ಉತ್ತಮ ಸೇವೆ ಸಲ್ಲಿಸುವ ಯುವಕ ಸಂಘಗಳಿಗೆ ಸಮಾಜದ ಪ್ರೋತ್ಸಾಹವೂ ಸದಾ ಇರುತ್ತದೆ. ಯುವ ಸಮುದಾಯಕ್ಕೆ ಇನ್ನಷ್ಟು ನಮ್ಮ ಕಲೆ, ಸಂಸ್ಕೃತಿ, ಸಂಪ್ರದಾಯ ತಲುಪಿಸುವ ಕಾರ್ಯ ನಿಮ್ಮಿಂದಾಗಲಿ ಎಂದು ಆಶಿಸುವೆ.