ಜಿಲ್ಲಾ ಆಸ್ಪತ್ರೆಗೆ ಉಪಲೋಕಾಯುಕ್ತ ಬಿ ವೀರಪ್ಪ ಭೇಟಿ ನೀಡಿದರು  
ಉಡುಪಿ

ನಿಟ್ಟೂರಿನ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಅವ್ಯವಸ್ಥೆಗೆ ಉಪ ಲೋಕಾಯುಕ್ತರ ಅಸಮಾಧಾನ

ಉಡುಪಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ರವರು ಇಂದು ನಿಟ್ಟೂರಿನ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಶುದ್ಧೀಕರಣ ಘಟಕ (ಎಸ್‌ಟಿಪಿ) ದ ನಿರ್ವಹಣೆಗೆ ಪ್ರತೀ ಮಾಹೆ ಸುಮಾರು ರೂ. 3 ಲಕ್ಷ ಕ್ಕೂ ಹೆಚ್ಚು ವೆಚ್ಚ ಮಾಡುತ್ತಿದ್ದರೂ ಸಹ ನಿರ್ವಹಣೆ ವ್ಯವಸ್ಥಿತವಾಗಿ ಇಲ್ಲದಿರುವುದು, ಘಟಕದಿಂದ ಹೊರಬರುತ್ತಿರುವ ದುರ್ವಾಸನೆ, ಕಳಪೆ ಶುದ್ಧೀಕರಣ ಹಾಗೂ ಪೂರ್ಣ ಪ್ರಮಾಣದಲ್ಲಿ ಶುದ್ಧವಾಗದೇ ಇರುವ ನೀರನ್ನು ಸಮುದ್ರಕ್ಕೆ ಬಿಡುತ್ತಿರುವುದು ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ನ್ಯೂನ್ಯತೆಗಳು ಕಂಡು ಬಂದ ಹಿನ್ನೆಲೆ, ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಲು ಸೂಚನೆ ನೀಡಿದರು.
ಘಟಕವು ಆರು ಹಂತಗಳಲ್ಲಿ ಶುದ್ಧೀಕರಣಗೊಂಡಿದೆ ಎಂದು ಹೇಳಲಾಗುತ್ತಿದ್ದರೂ ಘಟಕದಿಂದ ಕಪ್ಪುಬಣ್ಣದ ನೀರು ಹೊರಬರುತ್ತಿರುವುದು ಗಮನಿಸಿ ನ್ಯಾಯಮೂರ್ತಿಗಳು ಪರಿಸ್ಥಿತಿಯನ್ನು ಗಂಭೀರವೆAದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧಿಕಾರಿಯಾದ ಕೀರ್ತಿ ಕುಮಾರ್ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಶುದ್ಧೀಕರಿಸದ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದ್ದು, ಅಲ್ಲಿನ ಜಲಚರಗಳು ಮಲಿನ ನೀರಿನಲ್ಲಿರುವ ರಾಸಾಯನಿಕಗಳನ್ನು ಸೇವಿಸುವ ಅನಿವಾರ್ಯತೆ ಉಂಟಾಗಿದೆ. ಅಲ್ಲಿನ ಸಮುದ್ರ ಆಹಾರ ಉತ್ಪನ್ನಗಳು ಜನರು ಸೇವಿಸುತ್ತಿದ್ದಾರೆ. ಇದು ಪರೋಕ್ಷವಾಗಿ ಜನರಿಗೆ ವಿಷವೇ ಉಣಿಸಿದಂತಿದೆ ಎಂದ ಅವರು, ಸುಮಾರು 18 ಜಿಲ್ಲೆಗಳ ಎಸ್.ಟಿ.ಪಿ.ಗಳನ್ನು ಪರಿಶೀಲಿಸಿದ್ದರೂ ಉಡುಪಿಯಷ್ಟು ಕಳಪೆ ಸ್ಥಿತಿ ಎಲ್ಲಿಯೂ ಕಂಡಿಲ್ಲವೆAದು ಅವರು ತಿಳಿಸಿದರು.
ಮಲ್ಪೆ ಕಡೆಗೆ ತೆರಳುವ ವೇಳೆ ಇಂದ್ರಾಣಿ ನದಿಯ ಮಾಲಿನ್ಯದಿಂದ ಬಳಲುತ್ತಿರುವ ನಿವಾಸಿಗಳ ಸ್ಥಿತಿಯನ್ನೂ ಅವರು ಪರಿಶೀಲಿಸಿದರು. ಸ್ಥಳೀಯ ನಿವಾಸಿ ಇಂದಿರಾ, ಹಲವಾರು ವರ್ಷಗಳಿಂದ ನಾವು ಬಾವಿ ನೀರನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಹಿಂದೆ ಸ್ನಾನಕ್ಕೂ ಬಳಸುತ್ತಿದ್ದೆವು. ಈಗ ನೀರು ರಾಸಾಯನಿಕಗಳಿಂದ ತುಂಬಿರುವುದರಿAದ ಮೀನುಗಳೂ ಬದುಕುತ್ತಿಲ್ಲ, ದುರ್ವಾಸನೆಯಿಂದ ಅನೇಕರು ಆಸ್ತಮಾ ಮತ್ತು ಉಸಿರಾಟದ ಸಮಸ್ಯೆ ಅನುಭವಿಸುತ್ತಿದ್ದಾರೆ, ಸಿಎಂಸಿ ಕುಡಿಯುವ ನೀರನ್ನು ಪೈಪ್ ಮೂಲಕ ಪೂರೈಸುತ್ತಿರುವುದರಿಂದ ನಾವು ಬದುಕುತ್ತಿದ್ದೇವೆ. ಸಂಜೆ ವೇಳೆಯಲ್ಲಿ ದುರ್ವಾಸನೆ ತಾಳಲಾರದ ಕಾರಣ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತೇವೆ, ಎಂಬ ವಿಷಯಗಳ್ನು ತಿಳಿದ ಅವರು, ಬೇಸರ ವ್ಯಕ್ತಪಡಿಸಿ, ಇಂತಹ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ವೀರಪ್ಪ ಎಚ್ಚರಿಕೆ ನೀಡಿದರು.
ನಗರದ ಬನ್ನಂಜೆಯ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು ಹಾಗೂ ಅವರ ತಂಡದವರು ಮಳಿಗೆಗಳಲ್ಲಿ ಮಾರಾಟ ಮಾಡುತ್ತಿರುವ ಸಿದ್ಧ ಆಹಾರ ಪದಾರ್ಥಗಳ ಹಾಗೂ ಪಾನೀಯಗಳ ತಯಾರಾದ ದಿನಾಂಕ ಮತ್ತು ಅವಧಿ ಮುಗಿದ ದಿನಾಂಕಗಳ ಪರಿಶೀಲನೆ ನಡೆಸಿದರು. ಅಲ್ಲಿನ ಹೋಟೆಲ್‌ನ ಅಡುಗೆ ಕೋಣೆಗೆ ಭೇಟಿ ನೀಡಿ, ಶುದ್ಧತೆ ಹಾಗೂ ಆಹಾರ ತಯಾರಿಕೆ ಬಗ್ಗೆ ವೀಕ್ಷಿಸಿದ ಅವರು, ಹೋಟೆಲ್ ಮಾಲೀಕರುಗಳಿಗೆ ಜನರಿಗೆ ಉತ್ತಮ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ನೀಡಬೇಕು. ಆದಷ್ಟು ಸ್ವಚ್ಛತೆಗೆ ಆದ್ಯತೆ ನೀಡಬೇಕು. ತಿಂಡಿ-ತಿನಿಸುಗಳ ದರಪಟ್ಟಿಯನ್ನು ಪ್ರದರ್ಶಿಸಬೇಕೆಂದ ಅವರು, ಜಿಲ್ಲಾ ಆಹಾರ ಅಂಕಿತ ಅಧಿಕಾರಿಗಳು ಪರಿಶೀಲನೆ ಮಾಡಲು ಸೂಚನೆ ನೀಡಿದ ಅವರು, ತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು ಆಗಿಂದ್ದಾಗ್ಗೆ ವಿಲೇವಾರಿಯನ್ನು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮಾಡಬೇಕು. ಅವುಗಳ ಸಂಗ್ರಹಣೆಗೆ ಬಳಸಿರುವ ಕಸ ಹಾಕುವ ಡಬ್ಬಿಗಳ ಮುಚ್ಚುಳವನ್ನು ಅಳವಡಿಸಬೇಕೆಂದು ಸೂಚನೆ ನೀಡಿದರು.
ಉಡುಪಿ ತಾಲೂಕು ಕಚೇರಿಗ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಹಾಗೂ ತಂಡ, ತಾಲೂಕು ಕಛೇರಿಯ ಆಡಳಿತ ವಿಭಾಗ, ಟಪ್ಪಾಲು ವಿಭಾಗ, ಭೂಮಿ ಕೇಂದ್ರ, ಅರ್ಜಿ ಸ್ವೀಕಾರ ಅವುಗಳ ನಿರ್ವಹಣಾ ಕೇಂದ್ರಗಳಿಗೆ ಭೇಟಿ ನೀಡಿ, ಕಡತಗಳನ್ನು ಹಾಗೂ ರಿಜಿಸ್ಟರ್ ಗಳನ್ನು ಪರಿಶೀಲಿಸಿದಾಗ ನ್ಯೂನ್ಯತೆಗಳು ಕಂಡು ಬಂದ ಹಿನ್ನೆಲೆ ಹಾಗೂ ಚಿಟ್ ಫಂಡ್ ಕಚೇರಿಯಲ್ಲಿ ನಡೆಸಿರುವ ಬಗ್ಗೆ ಹಾಗೂ ಸಮವಸ್ತçಗಳನ್ನು ಧರಿಸದೇ ಇರುವ ಹಿನ್ನೆಲೆ ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಿಕೊಂಡರು.
ತಾಲೂಕು ಭೂ ದಾಖಲೆಗಳ ಕಚೇರಿ ಭೇಟಿ ನೀಡಿದ ಅವರು, ಅಲ್ಲಿನ ದಾಖಲೆಗಳನ್ನು ಪರಿಶೀಲಿಸಿ, 1500 ಕ್ಕೂ ಹೆಚ್ಚು 11 ಎ , ತತ್ಕಾಲ್ ಪೋಡಿ ಸೇರಿದಂತೆ ಮತ್ತಿತರ ಅಳತೆ ಅರ್ಜಿಗಳು ಬಾಕಿ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಗಳು ಉಂಟಾಗುತ್ತಿವೆ. ಮುಂದಿನ ಮೂರು ತಿಂಗಳ ಒಳಗಾಗಿ ಇವುಗಳ ಪೂರ್ಣ ಪ್ರಮಾಣದಲ್ಲಿ ವಿಲೇವಾರಿ ಮಾಡಬೇಕು. ಕಳೆದ 7 ವರ್ಷಗಳಿಂದ ನಿವೃತ್ತ ಸೈನಿಕನ ಜಮೀನಿನ ಅಳತೆ ಮಾಡದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಒಂದು ವಾರದ ಒಳಗಾಗಿ ಮಾಡಿಕೊಡಬೇಕು ಎಂದು ತಿಳಿಸಿ, ನ್ಯೂನ್ಯತೆಗಳು ಕಂಡು ಬಂದ ಹಿನ್ನೆಲೆ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.
ಉಪನೋಂದಣಾಧಿಕಾರಿಗಳ ಕಛೇರಿ ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೋಂದಣಿಗೆ ಆಗಮಿಸಿದ ಜನರ ಸಮಸ್ಯೆಗಳನ್ನು ಆಲಿಸಿದ ಅವರು, ಕಚೇರಿಯ ಕಡತಗಳು ಪರಿಶೀಲನೆ ನಡೆಸಿದರು. ಅಲ್ಲಿನ ಗುತ್ತಿಗೆ ನೌಕರರು ತಮ್ಮ ಸ್ವಂತ ಬ್ಯಾಗ್‌ನಲ್ಲಿ ಅನೇಕ ಖಾಸಗಿ ದಾಖಲೆಗಳು ಕಂಡು ಬಂದ ಹಿನ್ನೆಲೆ, ಇವುಗಳ ಬಗ್ಗೆ ಸೂಕ್ತ ವಿವರಗಳನ್ನು ನೀಡದೇ ಹಾಗೂ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ನ್ಯೂನ್ಯತೆಗಳು ಕಂಡು ಬಂದ ಹಿನ್ನೆಲೆ, ಪರಕರಣ ದಾಖಲಿಸಲು ಸೂಚನೆ ನೀಡಿದರು.
ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು ಜಿಲ್ಲಾ ಆಸ್ಪತ್ರೆಯ ಔಷಧಿ ವಿತರಣಾ ಕೇಂದ್ರ, ನೋಂದಣಿ ಕೇಂದ್ರ, ಮಹಿಳಾ ವಾರ್ಡ್, ಪ್ರಯೋಗಾಲಯ, ರಕ್ತನಿಧಿ ಕೇಂದ್ರ, ಆಸ್ಪತ್ರೆಯ ಆಡಳಿತ ವಿಭಾಗಕ್ಕೆ ಭೇಟಿ ನೀಡಿದ ಅವರು, ಆಡಳಿತ ಕೇಂದ್ರದಲ್ಲಿ ದಾಖಲೆಗಳ ಪರಿಶೀಲನೆಯನ್ನು ನಡೆಸಿದರು.
ನಗರಸಭೆ ಕಚೇರಿಗೆ ಹಠಾತ್ ಭೇಟಿ ಮಾಡಿದ ಅವರು, ಅಲ್ಲಿನ ಬಯೋಮೆಟ್ರಿಕ್‌ನ ಕಾರ್ಯ, ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ಕಾಮಗಾರಿಗಳ ವಿವರ, ವಾಹನಗಳ ನಿರ್ವಹಣೆ, ಆಸ್ತಿ ತೆರಿಗೆ ಸಂಗ್ರಹ, ಇ-ಆಸ್ತಿ ಮಾಡುವ ಬಾಕಿ ಇರುವ ಅರ್ಜಿಗಳ ವಿವರ, ಉದ್ದಿಮೆ ಪರವಾನಿಗೆ, ಪಾರ್ಕ್ಗಳ ನಿರ್ವಹಣೆ, ನಗರಸಭೆಯ ಭೂಮಿಯ ಅತಿಕ್ರಮ ಸೇರಿದಂತೆ ಮತ್ತಿತರ ವಿವರಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕರು ವಿಚಾರಣೆ - 1 ಶ್ರೀಯುತ ಅರವಿಂದ್ ಎನ್.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಬಿ.ಪಿ ದಿನೇಶ್ ಕುಮಾರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್, ಸಹಾಯಕ ಕಮೀಷನರ್ ರಶ್ಮಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.