ಉಡುಪಿ-ಮಣಿಪಾಲ ರಾ.ಹೆ. ಪಕ್ಕದಲ್ಲೇ ಇರುವ ಖಾಲಿ ನಿವೇಶನದಲ್ಲಿ ಅನಗತ್ಯ ಬೆಳೆದ ಗಿಡಗಂಟಿ. 
ಉಡುಪಿ

ಖಾಲಿ ನಿವೇಶನ 'ವಿಷಜಂತು' ತಾಣ

* ಉಡುಪಿ ನಗರದಲ್ಲಿ ಬೆಳೆಯುತ್ತಿದೆ ಕಾಡು!

* ಸ್ಥಳೀಯ ನಿವಾಸಿಗರಿಗೆ ಹಾವುಗಳ ಭಯ

ಪ್ರಶಾಂತ ಭಾಗ್ವತ ಉಡುಪಿ
ಉಡುಪಿ ನಗರದ ವಿವಿಧ ವಾರ್ಡ್​ಗಳಲ್ಲಿ ಅಲ್ಲಲ್ಲಿ ಸಣ್ಣ ಕಾಡುಗಳು ತಲೆಎತ್ತಿವೆ. ಕಾಡನ್ನೇ ಕಡಿದು ನಗರ ಮಾಡುತ್ತಿರುವಾಗ ನಗರದಲ್ಲಿ ಕಾಡು ಬೆಳೆಸಲಾಗುತ್ತಿದೆಯೇ ಎಂಬ ಶಂಕೆ ಬೇಡ. ಇದು ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಕೃತಕ ಕಾಡು.
ಉಳ್ಳವರು ಲಕ್ಷ, ಕೋಟ್ಯಂತರ ರೂ. ವ್ಯಯಿಸಿ ನಗರದ ಹೃದಯ ಭಾಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಲವಾರು ವರ್ಷದ ಹಿಂದೆಯೇ ನಿವೇಶನ ಖರೀದಿಸಿದ್ದಾರೆ. ಕೆಲವರು ಊರಿನಲ್ಲೇ ಇದ್ದರೆ, ಹಲವರು ವಿದೇಶಗಳಲ್ಲಿ ವಾಸ್ತವ್ಯ ಮಾಡಿಕೊಂಡಿದ್ದಾರೆ. ಖಾಲಿ ನಿವೇಶನಗಳ ನಿರ್ವಹಣೆಯಿಲ್ಲದೆ ಅರಣ್ಯದಂತಾಗಿದ್ದು, ವಿಷಜಂತುಗಳ ವಾಸಸ್ಥಾನವಾಗಿದೆ.

ಹಾವುಗಳ ಸಂಚಾರ

ಖಾಲಿ ನಿವೇಶನಗಳ ಸುತ್ತಮುತ್ತ ಮನೆ ಕಟ್ಟಿಕೊಂಡವರಿಗೆ ಹಾಗೂ ವಸತಿ ಸಮುಚ್ಚಯದಲ್ಲಿ ನೆಲೆಸಿರುವವರಿಗೆ ದಿನವೂ ಭಯಗೊಳ್ಳುವಂತಾಗಿದೆ. ಖಾಲಿ ಜಾಗಗಳಲ್ಲಿ ಅಪಾರ ಪ್ರಮಾಣದಲ್ಲಿ ಗಿಡಗಂಟಿ ಹಾಗೂ ಮರಗಳು ಬೆಳೆದಿದ್ದು ಹಾವು, ಚೇಳು, ಮುಂಗಸಿ, ಹೆಗ್ಗಣ, ಹೆಬ್ಬಾವುಗಳು ವಾಸ್ತ$ವ್ಯ ಮಾಡಿಕೊಂಡಿವೆ. ಪಕ್ಕದಲ್ಲೇ ಇರುವ ರಸ್ತೆಯಲ್ಲಿ ನಾಗರಹಾವು, ಹೆಬ್ಬಾವುಗಳು ಖಾಲಿ ನಿವೇಶನಗಳಿಂದ ಅತ್ತಿಂದಿತ್ತ ಸಂಚರಿಸುತ್ತಿವೆ. ನಗರದ ಮುಖ್ಯ ರಸ್ತೆಗಳಲ್ಲೂ ಹಗಲಲ್ಲೇ ಹೆಬ್ಬಾವುಗಳ ಸಂಚಾರ ಕಂಡುಬರುತ್ತಿದೆ.

ಶಾಲಾ ಮಕ್ಕಳಿಗೆ ಭಯ

ಖಾಲಿ ನಿವೇಶನಗಳಲ್ಲಿ ವಿಷಜಂತು ಇರುವುದನ್ನು ಕಂಡಿರುವ ಶಾಲಾ ಮಕ್ಕಳು ಹಾಗೂ ಪಾಲಕರು ಆ ಮಾರ್ಗದ ರಸ್ತೆಯಲ್ಲಿ ಸಂಚರಿಸಲು ಭಯಗೊಳ್ಳುತ್ತಿದ್ದಾರೆ. ಬೆಳಗ್ಗೆ ಶಾಲೆಗೆ ಹೋಗುವಾಗ ಹಾಗೂ ಮರಳಿ ಮನೆಗೆ ಬರುವಾಗ ಪಾಲಕರೂ ರಸ್ತೆಗೆ ಬಂದು ಶಾಲಾ ವಾಹನದಿಂದ ಮಕ್ಕಳನ್ನು ಇಳಿಸಿಕೊಂಡು ಮನೆಗೆ ಕರೆದೊಯ್ಯುತ್ತಿದ್ದಾರೆ. 

ಗಿಡ-ಮರ ತೆರವುಗೊಳಿಸಿ

ಖಾಲಿ ನಿವೇಷನಗಳಲ್ಲಿರುವ ಹಾವುಗಳು ಆಹಾರ ಹುಡುಕುತ್ತ ಬಂದು ಸಮೀಪದ ಮನೆಗಳ ಗೋಡೆಯನ್ನೂ ಏರುತ್ತಿವೆ. ವಿಷಜಂತುಗಳಿಂದ ಸದ್ಯ ಯಾವುದೇ ಅಪಾಯ ಆಗದಿದ್ದರೂ ಮುಂದೆ ಅನಾಹುತ ಆಗಬಹುದು. ಹೀಗಾಗಿ ನಗರಸಭೆಯ ಅಧಿಕಾರಿಗಳು ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡ&ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನಗರ ವಾಸಿಗರು ಆಗ್ರಹಿಸಿದ್ದಾರೆ.

ನಗರಸಭೆಯಿಂದ ಕಾನೂನು ಕ್ರಮದ ಎಚ್ಚರಿಕೆ

ಉಡುಪಿ ನಗರ ವ್ಯಾಪ್ತಿಯಲ್ಲಿ ಅನೇಕ ಖಾಸಗಿ ಜಾಗಗಳ ಮಾಲೀಕರು ತಾವು ಖರೀದಿ ಮಾಡಿರುವ ನಿವೇಶನಗಳಲ್ಲಿ ಮನೆ ಅಥವಾ ಯಾವುದೇ ಪ್ರಗತಿಪರ ಕಾಮಗಾರಿ ಕೈಗೊಳ್ಳದೆ ಖಾಲಿ ಬಿಟ್ಟಿದ್ದಾರೆ. ಹೀಗಾಗಿ ಅಲ್ಲಿ ಹುಲ್ಲು, ಗಿಡಗಂಟಿ ಬೆಳೆದಿದ್ದು ಇಲ್ಲಿಯೇ ಅನೇಕರು ಮನೆಯ ಕಸ-ತ್ಯಾಜ್ಯವನ್ನೂ ಎಸೆಯುವುದು ಕಂಡುಬರುತ್ತಿದೆ. ಅನಗತ್ಯವಾಗಿ ಪೊದೆ ಬೆಳೆದಿದ್ದರಿಂದ ಹಾವು ಇನ್ನಿತರ ವಿಷಜಂತು ಅಲ್ಲಿ ನೆಲಸಲು ಅನುಕೂಲ ಆಗುತ್ತಿವೆ. ಖಾಲಿ ನಿವೇಶನಗಳಿಂದ ಆಗುತ್ತಿರುವ ತೊಂದರೆ ಕುರಿತು ಸಾರ್ವಜನಿಕರಿಂದ ದೂರುಗಳು ಬರತೊಡಗಿವೆ. ಕೂಡಲೇ ಮಾಲೀಕರು ತಮ್ಮ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿ, ಮರಗಳನ್ನು ತೆರವು ಮಾಡಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸಿ ಕಾನೂನು ಕ್ರಮ ಕೂಗೊಳ್ಳುವುದಾಗಿ ನಗರಸಭೆ ಎಚ್ಚರಿಕೆ ನೀಡಿದೆ.
"

ಉಡುಪಿಯಲ್ಲಿ ವಸತಿ ಸಮುಚ್ಚಯಗಳ ನಡುವೆ ಅಲ್ಲಲ್ಲಿ ಖಾಲಿ ನಿವೇಶನಗಳಿದ್ದು, ಕಾಡಿನಂತೆ ಬೆಳೆದಿವೆ. ಭಾರಿ ಪ್ರಮಾಣದಲ್ಲಿ ಪೊದೆ ಬೆಳೆದಿರುವುದರಿಂದ ವಿಷಕಾರಿ ಹಾವುಗಳು ಇದ್ದು, ರಸ್ತೆ ಹಾಗೂ ಸಮೀಪದ ಮನೆಯಂಗಳಕ್ಕೂ ಬರುತ್ತಿವೆ. ಮಕ್ಕಳು, ಮಹಿಳೆಯರು ಭಯಗೊಳ್ಳುತ್ತಿದ್ದಾರೆ. ಕಾಡುಗಳಂತಾದ ನಿವೇಶನಗಳ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

— ಗಣೇಶರಾಜ್​ ಸರಳಬೆಟ್ಟು. ಸಮಾಜ ಸೇವಕ.
"

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸುಮಾರು ಆರು ಸಾವಿರಕ್ಕೂ ಅಧಿಕ ಖಾಲಿ ನಿವೇಶನಗಳಿವೆ. ನೂರಾರು ನಿವೇಶನಗಳು ನಿರ್ವಹಣೆ ಇಲ್ಲದ್ದರಿಂದ ಕಾಡಿನಂತಾಗಿವೆ. ಬಹುತೇಕ ಖಾಲಿ ನಿವೇಶನಗಳ ಮಾಲೀಕರು ಹೊರ ರಾಜ್ಯ ಅಥವಾ ವಿದೇಶದಲ್ಲಿರುವುದರಿಂದ ಯಾರದ್ದೆಂದು ಪತ್ತೆ ಹಚ್ಚುವುದು ಕಷ್ಟ. ಯಾರಿಗಾದರೂ ತೊಂದರೆ ಆಗುತ್ತಿದ್ದರೆ ದೂರು ಅಥವಾ ಮಾಲೀಕರ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಗರಸಭೆಯಿಂದಲೇ ಗಿಡ&ಮರಗಳನ್ನು ತೆರವುಗೊಳಿಸಿ ಅದರ ವೆಚ್ಚವನ್ನು ನಿವೇಶನಗಳ ಮಾಲೀಕರಿಂದಲೇ ಭರಿಸಿಕೊಳ್ಳಲಾಗುವುದು.

— ಮಹಾಂತೇಶ್​ ಹಂಗರಗಿ. ನಗರಸಭಾ ಪೌರಾಯುಕ್ತ.