ವಿಜಯವಾಣಿ ಸುದ್ದಿಜಾಲ ಕುಂದಾಪುರ
ಜಿಲ್ಲೆಯಲ್ಲಿ ಮಕ್ಕಳ ಕೊರತೆ ಕಾರಣಕ್ಕೆ ಕೆಲವು ಸರ್ಕಾರಿ ಶಾಲೆಗಳನ್ನು ಮುಚ್ಚಿ ಸಮೀಪದ ಶಾಲೆಗಳ ಜತೆ ವಿಲೀನ ಮಾಡಲಾಗಿದೆ. ಹೀಗೆ ಮುಚ್ಚಿದ ಶಾಲಾ ಕಟ್ಟಡಗಳು ಅನುಪಯುಕ್ತವಾಗಿದ್ದು, ಅವುಗಳನ್ನು ಅನ್ಯ ಉದ್ದೇಶ ಬಳಕೆಗೆ ಅವಕಾಶ ನೀಡಲು ಸರ್ಕಾರ ನಿರಾಕರಿಸಿದೆ. ಈ ಕಟ್ಟಡಗಳನ್ನು ಸರ್ಕಾರದ ಬೇರೆ ಇಲಾಖೆಗೆ ಬಳಸಲು ಕಡ್ಡಾಯ ಶಿಕ್ಷಣ ಕಾಯ್ದೆ ತೊಡಕಾಗಿದೆ.
6ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಯಲ್ಲಿರುವ ಕಾರಣ ಭವಿಷ್ಯದಲ್ಲಿ ಎಂದಾದರೂ ಆ ಶಾಲೆಗಳು ಬಳಕೆಗೆ ಬೇಕಾಗಬಹುದು ಎಂಬ ದೂರದೃಷ್ಟಿತ್ವ ಸರ್ಕಾರದ್ದು. ಈಗ ಅನುಪಯುಕ್ತವೆಂದು ಬೇರೆ ಇಲಾಖೆಗೆ ಕಟ್ಟಡಗಳನ್ನು ಹಸ್ತಾಂತರಿಸಿದರೆ ಮರಳಿ ಪಡೆಯುವುದು ಕಷ್ಟ ಎನ್ನುವುದು ಸರ್ಕಾರದ ಅಭಿಪ್ರಾಯ. ಅಲ್ಲದೆ ಶಾಲಾ ಕಟ್ಟಡಗಳನ್ನು ಶಿಕ್ಷಣ ಇಲಾಖೆ ಹೊರತಾಗಿ ಸರ್ಕಾರದ ಇತರ ಇಲಾಖೆಗಳಿಗೆ ಹಸ್ತಾಂತರಿಸಲು ಕಡ್ಡಾಯ ಶಿಕ್ಷಣ ಕಾಯ್ದೆ ತೊಡಕೂ ಇದೆ.
ಸದುಪಯೋಗಕ್ಕೆ ಮುಂದಾಗಿದ್ದ ಜಿಲ್ಲಾಡಳಿತ:
ಜಿಲ್ಲೆಯಲ್ಲಿ ಅನುಪಯುಕ್ತ ಶಾಲಾ ಕಟ್ಟಡಗಳ ಸದುಪಯೋಗಕ್ಕೆ 2 ವರ್ಷಗಳ ಹಿಂದೆ ಜಿಲ್ಲಾಡಳಿತ ಯೋಜನೆ ರೂಪಿಸಿತ್ತು. ಜತೆಗೆ ಬೈಂದೂರು ಶಾಸಕರು ಸಮೃದ್ಧ ಬೈಂದೂರು ಪರಿಕಲ್ಪನೆಯ ಯೋಜನೆಗೆ ಇಂತಹ ಕಟ್ಟಡಗಳನ್ನು ಬಳಸಿಕೊಳ್ಳಲು ತೀರ್ವಾನಿಸಿದ್ದರು. ಜಿಲ್ಲೆಯಲ್ಲಿರುವ ಅನುಪಯುಕ್ತ ಶಾಲೆಗಳ ಪಟ್ಟಿ ತರಿಸಿ ಅಲ್ಲಿ ಸರ್ಕಾರಿ ಕಚೇರಿ, ಹಾಸ್ಟೆಲ್, ಸರ್ಕಾರದ ಯಾವುದಾದರೂ ಅಂಗಸಂಸ್ಥೆಗಳು ಕಾರ್ಯಾಚರಿಸಬಹುದೆಂಬ ಆಶಯವನ್ನೂ ಅಂದಿನ ಜಿಪಂ ಸಿಇಒ ಪ್ರಸನ್ನ ಎಚ್. ವ್ಯಕ್ತಪಡಿಸಿದ್ದರು.
ಈಗಾಗಲೇ ಅನೇಕ ಕಡೆ ಹಾಸ್ಟೆಲ್‌ಗಳ ಕೊರತೆಯಿದೆ, ಇರುವ ಹಾಸ್ಟೆಲ್‌ಗಳಲ್ಲಿ ಸ್ಥಳದ ಅಭಾವ ಇದೆ. ಹೆಚ್ಚಿನ ಕಡೆ ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿವೆ. ಇದಕ್ಕಾಗಿ ಸರ್ಕಾರ ಪ್ರತಿವರ್ಷ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಜತೆಗೆ ಅನೇಕ ಸರ್ಕಾರಿ ಕಚೇರಿಗಳು ಬಾಡಿಗೆ ನೆಲೆಯಲ್ಲಿ ಖಾಸಗಿ ಕಟ್ಟಡದಲ್ಲಿವೆ. ಮುಚ್ಚಿರುವ ಸರ್ಕಾರಿ ಶಾಲಾ ಕಟ್ಟಡಗಳನ್ನು ಇವುಗಳಿಗೆ ಬಳಸಿದರೆ ಬಾಡಿಗೆ ವೆಚ್ಚ ತಗ್ಗಿಸಿ, ಆರ್ಥಿಕ ಹೊರೆ ಇಳಿಸಬಹುದು ಎನ್ನುವುದು ಚಿಂತನೆಯಾಗಿತ್ತು. ಆದರೆ ಈಗ ಸರ್ಕಾರ ಕಟ್ಟಡವನ್ನು ಬೇರೆ ಇಲಾಖೆಗೆ ಹಸ್ತಾಂತರಿಸಲು ನಿರಾಕರಿಸಿದ ಕಾರಣ ಇದ್ಯಾವುದೂ ಕಾರ್ಯಗತವಾಗುತ್ತಿಲ್ಲ.
ಶಾಲೆ ಮುಚ್ಚುವುದಿಲ್ಲ
ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಶಾಲೆಯನ್ನು ಮುಚ್ಚಿದರೂ ಶಿಕ್ಷಣ ಇಲಾಖೆ ಪ್ರಕಾರ ಶಾಲೆ ಮುಚ್ಚುವುದು ಎನ್ನುವುದಿಲ್ಲ. ಬದಲಿಗೆ ಸಮೀಪದ ಶಾಲೆಗಳ ಜತೆ ವಿಲೀನ ಎಂದು ತನ್ನದೇ ಪಾರಿಭಾಷಿಕ ಪದದಲ್ಲಿ ವಿವರಿಸುತ್ತದೆ. ನಿರುಪಯುಕ್ತವಾಗಿ ಪಾಳು ಬಿದ್ದ ಶಾಲಾ ಕಟ್ಟಡಗಳು ಕೆಲವೆಡೆ ಅನೈತಿಕ ಚಟುವಟಿಕೆ ತಾಣವಾಗಿವೆ. ವಾಡು, ಪಕ್ಕಾಸು, ರೀಪು, ಬಾಗಿಲು, ಕಿಟಕಿ ಕಳ್ಳತನವಾಗುವುದೂ ಇದೆ. ಆದರೆ, ಮುಂದೊಮ್ಮೆ ಈ ಶಾಲೆ ಪುನರುಜ್ಜೀವನಕ್ಕೆ ಯಾರಾದರೂ ಮುಂದಾದರೆ ಕಟ್ಟಡ ಬೇಕಾಗುತ್ತದೆಂಬುದು ಇಲಾಖೆಯ ನಿಲುವು.
ಕಡ್ಡಾಯ ಶಿಕ್ಷಣ ಯೋಜನೆ ಅನುಷ್ಠಾನದಲ್ಲಿರುವ ಕಾರಣ ಶಿಕ್ಷಣ ಇಲಾಖೆ ಕಟ್ಟಡಗಳನ್ನು ಬೇರೆ ಇಲಾಖೆಗೆ ಹಸ್ತಾಂತರಿಸಲು ಕಾನೂನಿನ ತೊಡಕು ಇದೆ. ಪ್ರಸ್ತುತ ಮಕ್ಕಳ ಸಂಖ್ಯೆ ಕಡಿಮೆ ಎಂದು ಶಾಲೆಗಳು ಕಾರ್ಯನಿರ್ವಹಿಸದಿದ್ದರೂ ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಬೇಕಾಗುತ್ತದೆ ಎಂಬ ನೆಲೆಯಲ್ಲಿ ಹಾಗೆಯೇ ಇರಿಸಬೇಕೆಂಬ ನಿಯಮವಿದೆ.