ಅವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ಸಂಸ್ಕರಣೆಗಾಗಿ ಚೆರ್ಕಳದ ವಸತಿಗೃಹಗಳ ಮುಂಭಾಗದಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಇನ್‌ಸ್ಟಿನೇಟರನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.  
ಉಡುಪಿ

ಅವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ, ದಂಡ ವಸೂಲಿ

ಕಾಸರಗೋಡು: ಚೆರ್ಕಳದ ಅಪಾರ್ಟ್‌ಮೆಂಟ್ ಆಸುಪಾಸು ಶುಚಿತ್ವ ಪಾಲನೆಯಲ್ಲಿ ಲೋಪವೆಸಗಿರುವುದು ಹಾಗೂ ಅವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ಸಂಸ್ಕರಣೆ ಪತ್ತೆ ಹಚ್ಚಿರುವ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳು ಕಟ್ಟಡ ಮಾಲೀಕರಿಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ.
ಅವೈಜ್ಞಾನಿಕವಾಗಿ ಸುರಿಯಲಾದ ತ್ಯಾಜ್ಯ ಚರಂಡಿಯಲ್ಲಿ ಸಂಗ್ರಹಗೊಂಡು ನೀರು ಹರಿವಿಗೆ ಅಡ್ಡಿಯಾಗಿ ಮಲಿನ ನೀರು ರಸ್ತೆಯಲ್ಲೇ ಹರಿಯುತ್ತಿತ್ತು. ಕಟ್ಟಡದ ಮಾಲೀಕರಿಗೆ ದಂಡ ವಿಧಿಸಿ, ಸಮಸ್ಯೆ ಬಗೆಹರಿಸಲು ಎರಡು ದಿವಸ ಕಾಲಾವಕಾಶ ನೀಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲು ಗ್ರಾಪಂ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ.
ಇನ್ನೊಂದು ಪ್ರಕಣದಲ್ಲಿ ನೀಲೇಶ್ವರ ಮೂಲದ ಏಜೆನ್ಸಿಯೊಂದರ ಶೆಡ್‌ನ ಹೊರಗೆ ತ್ಯಾಜ್ಯ ರಾಶಿ ಹಾಕಿದ್ದ ಮಾಲೀಕಗೆ 10 ಸಾವಿರ ರೂ. ದಂಡ ವಿಧಿಸಲಾಯಿತು. ಅವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ಸುರಿದ ಪ್ರಕರಣಕ್ಕೆ ಸಂಬಂಧಿಸಿ ನೀಲೇಶ್ವರ ನಗರಸಭಾ ವ್ಯಾಪ್ತಿಯ ಸೇಂಟ್ ಪೀಟರ್ಸ್ ಶಾಲೆ ಮತ್ತು ತೇಜಸ್ವಿನಿ ಆಸ್ಪತ್ರೆ, ಎಣ್ಮಕಜೆ ಗ್ರಾಪಂ ವ್ಯಾಪ್ತಿಯ ಅಡ್ಯನಡ್ಕದ ಸೂಪರ್‌ಮಾರ್ಕೆಟ್ ಮತ್ತು ವಸತಿಗೃಹ, ಮೊಗ್ರಾಲಿನಲ್ಲಿರುವ ವಸತಿಗೃಹಗಳು, ಸೂಪರ್‌ಮಾರ್ಕೆಟ್ ಹಾಗೂ ಬೆಳ್ಳೂರು ನಾಟೆಕಲ್ಲಿ ಸರ್ಕಾರಿ ಪ್ರೌಢಶಾಲೆ, ವಸತಿಗೃಹಗಳಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ಲೋಪವೆಸಗಿರುವ ಹಿನ್ನೆಲೆ ಆ ಸಂಸ್ಥೆ ಮಾಲೀಕರಿಗೂ ದಂಡ ವಿಧಿಸಲಾಯಿತು. ಜಿಲ್ಲಾ ಎನ್‌ಫೋರ್ಸ್‌ಮೆಂಟ್ ದಳದ ಮುಖ್ಯಸ್ಥ ಕೆ.ವಿ.ಮುಹಮ್ಮದ್ ಮದನಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.