ಸಂಚಾರಿ ನಿಯಮ ಉಲ್ಲಂಘಿಸಿ ರಾ.ಹೆ.ಯಲ್ಲಿ ಸಂಚರಿಸುತ್ತಿರುವ ಲಾರಿ.
- ದ್ವಿಚಕ್ರ ವಾಹನ ಸವಾರರಿಗೆ ತೊಂದರೆ
- ಸ್ಥಳೀಯರಿಗೆ ಅನಾರೋಗ್ಯ ಭೀತಿ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಟಿಪ್ಪರ್ ಲಾರಿಗಳು ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ಸಾಗಾಟ ಮಾಡುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಮತ್ತು ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಎಗ್ಗಿಲ್ಲದೆ ಕೆಂಪು ಮಣ್ಣು ಸಾಗಾಟ:
ಸಂಚಾರಿ ನಿಯಮ ಉಲ್ಲಂಘಿಸಿ ಚಲಿಸುತ್ತಿರುವ ಲಾರಿಯಿಂದ ರಸ್ತೆಯುದ್ದಕ್ಕೂ ಧೂಳು ಹಬ್ಬಿರುವುದು. ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಕೆಂಪು ಮಣ್ಣು ಸಾಗಾಟದ ಟಿಪ್ಪರ್ ಲಾರಿಗಳು ಪ್ರತಿನಿತ್ಯ ಸಂಚರಿಸುತ್ತಿದ್ದು, ಈ ಲಾರಿಗಳಲ್ಲಿ ಅವೈಜ್ಞಾನಿಕವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿದೆ. ಮಣ್ಣಿನ ಧೂಳು ಹಾರದಂತೆ ಟಾರ್ಪಾಲ್ ಹೊದಿಸಬೇಕೆಂದು ಜಿಲ್ಲಾಡಳಿತ ಆದೇಶ ನೀಡಿದ್ದರೂ ಕೆಲವು ಟಿಪ್ಪರ್ ಲಾರಿಗಳಲ್ಲಿ ತೋರಿಕೆಗಷ್ಟೇ ಟಾರ್ಪಾಲ್ ಸೀಮಿತವಾಗಿದೆ.
ಆರೋಗ್ಯದ ಮೇಲೆ ಗಂಭೀರ ಪರಿಣಾಮ:
ಕೆಂಪು ಮಣ್ಣು ಸಾಗಾಟ ಮಾಡುವ ಟಿಪ್ಪರ್ ಲಾರಿಗಳಿಂದ ಧೂಳು ಹಾರುತ್ತಿದ್ದು, ಮಣ್ಣು ರಸ್ತೆ ಮೇಲೆಲ್ಲ ಚೆಲ್ಲುತ್ತಾ ಹೋಗುತ್ತಿವೆ. ಇದರಿಂದ ಟಿಪ್ಪರ್ ಲಾರಿಗಳ ಹಿಂದಿನಿಂದ ಬರುವ ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ಧೂಳೂ ಹಾರುತ್ತಿದ್ದರೆ, ರಸ್ತೆ ತುಂಬೆಲ್ಲ ಬಿದ್ದಿರುವ ಮಣ್ಣಿನ ಧೂಳು ಪ್ರಯಾಣಿಕರ ಮತ್ತು ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಸಂಭವಿಸುತ್ತಿವೆ ಹಲವು ಅಪಘಾತಗಳು:
ಸಂಚಾರಿ ನಿಯಮ ಉಲ್ಲಂಘಿಸಿ ಭಾರಿ ಗಾತ್ರದ ಲಾರಿಗಳು ರಾ.ಹೆ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅನೇಕ ಟಿಪ್ಪರ್ ಲಾರಿಗಳಿಗೆ ನಂಬರ್ ಪ್ಲೇಟ್ ಇಲ್ಲ, ಅನೇಕ ಲಾರಿಗಳಿಗೆ ಸಿಗ್ನಲ್ ಲೈಟ್ ಇಲ್ಲ. ಪರಿಣಾಮ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಯಾವುದೇ ಸೂಚನೆ ನೀಡದೆ ಹಠಾತ್ತನೆ ರಸ್ತೆಯ ಅಲ್ಲಲ್ಲಿ ನಿಲ್ಲಿಸುವ ಟಿಪ್ಪರ್ ಲಾರಿಗಳು ಅಪಘಾತಕ್ಕೆ ಕಾರಣವಾಗುತ್ತಿದ್ದು, ಸಂಚಾರಿ ನಿಯಮ ಉಲ್ಲಂಸಿ ಸಂಚರಿಸುವ ಮಣ್ಣು ಸಾಗಾಟದ ಲಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.