ಹೆಮ್ಮಾಡಿ ಸಮೀಪ ರಾ.ಹೆ.ಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬು ನಿರ್ಮಿಸಿರುವುದು.  
ಉಡುಪಿ

ರಸ್ತೆ ತಡೆಗೆ ಅವೈಜ್ಞಾನಿಕ ಡೈವರ್ಶನ್!

ಇಂದಿರಾ ಎನ್ ಕೆ

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಹೆಮ್ಮಾಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅರಾಟೆ ಸೇತುವೆ ಕಾಮಗಾರಿ ಸಲುವಾಗಿ ಬ್ಯಾರಿಕೇಡ್ ಮೂಲಕ ರಸ್ತೆ ತಡೆ ನಿರ್ಮಿಸಿ ಅವೈಜ್ಞಾನಿಕವಾಗಿ ರಸ್ತೆಯ ಬಲಕ್ಕೆ ಡೈವರ್ಶನ್ ನೀಡಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ.
ಅರಾಟೆ ಸೇತುವೆ ದುರಸ್ತಿ ಕಾಮಗಾರಿ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಕುಂದಾಪುರದಿಂದ ಬೈಂದೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುವ ವಾಹನಗಳಿಗೆ ಹೆಮ್ಮಾಡಿ ಶ್ರೀ ಕಾಶೀ ಮಠದ ಸಮೀಪ ಅವೈಜ್ಞಾನಿಕವಾಗಿ ರಸ್ತೆಯ ಬಲಕ್ಕೆ ಡೈವರ್ಶನ್ ನೀಡಲಾಗಿದೆ. ಡೈವರ್ಶನ್ ನೀಡಿರುವ ಸ್ಥಳದ ಸ್ವಲ್ಪ ಹಿಂದೆ ಅವೈಜ್ಞಾನಿಕವಾಗಿ ಭಾರಿ ಆಳದ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ.

ನಾಮಫಲಕ ಇಲ್ಲ

ರಾಷ್ಟ್ರೀಯ ಹೆದ್ದಾರಿಯಲ್ಲಿ ಡೈವರ್ಶನ್ ಇರುವ ಮತ್ತು ರಸ್ತೆ ಉಬ್ಬು(ಹಂಪ್ಸ್) ಹಾಕಿರುವ ಬಗ್ಗೆ ವಾಹನ ಸವಾರರಿಗೆ ಗಮನಕ್ಕೆ ಬರುವ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಿಯೂ ನಾಮಫಲಕ ಅಳವಡಿಸಲಾಗಿಲ್ಲ. ಇಂಡಿಕೇಟರ್ ಲೈಟ್ ಕೂಡ ಅಳವಡಿಸಿಲ್ಲ. ರಸ್ತೆ ಉಬ್ಬುಗಳಿಗೆ ಬಣ್ಣ ಕೂಡ ಬಳಿದಿಲ್ಲ.

ಇದರಿಂದ ರಸ್ತೆ ಉಬ್ಬು ಇರುವ ಸ್ಥಳಕ್ಕೆ ಹತ್ತಿರ ಬಂದ ಮೇಲೆ ರಸ್ತೆ ಉಬ್ಬು ಇರುವುದನ್ನು ಕಂಡು ಅದೇ ವೇಗದಲ್ಲಿ ರಸ್ತೆ ಉಬ್ಬನ್ನು ದಾಟುವ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಇದು ಬಹಳಷ್ಟು ಅಪಾಯಕಾರಿಯಾಗಿದ್ದು, ಬಂದ ವೇಗದಲ್ಲಿ ರಸ್ತೆ ಉಬ್ಬು ದಾಟುವ ಸಂದರ್ಭ ವಾಹನಗಳು ನಿಯಂತ್ರಣ ತಪ್ಪಿದರೆ ಅಪಘಾತ ನಡೆಯುವ ಸಾಧ್ಯತೆಗಳಿವೆ.

ಈಗ ನೀಡಿರುವ ಸ್ಥಳಕ್ಕಿಂತ ಸ್ವಲ್ಪ ಹಿಂದೆ ಡೈವರ್ಶನ್ ನೀಡಬೇಕು. ಡೈವರ್ಶನ್ ಇರುವ ಮತ್ತು ರಸ್ತೆ ಉಬ್ಬು ಇರುವ ಬಗ್ಗೆ ವಾಹನ ಸವಾರರ ಗಮನಕ್ಕೆ ಬರುವ ಹಾಗೆ ಸೂಚನಾಫಲಕ ಅಳವಡಿಸಬೇಕು. ಆಳದ ರಸ್ತೆ ಉಬ್ಬು ತೆರವುಗೊಳಿಸಿ ಚಿಕ್ಕ ಚಿಕ್ಕ ರಸ್ತೆ ಉಬ್ಬು ಹಾಕಬೇಕು. ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಸಂಬಂಧಪಟ್ಟ ಗುತ್ತಿಗೆದಾರರು, ರಾ.ಹೆ.ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ವೇಗ ಅಂದಾಜಿಸದೆ ಅಪಘಾತ

ರಸ್ತೆ ಉಬ್ಬು ದಾಟಲು ವಾಹನಗಳ ವೇಗ ಕಡಿಮೆಗೊಂಡಾಗ ಹಿಂದಿನಿಂದ ಬರುವ ವಾಹನಗಳು ಎದುರು ವಾಹನದ ವೇಗವನ್ನು ಅಂದಾಜಿಸಲಾಗದೆ ಮತ್ತು ರಸ್ತೆ ಉಬ್ಬು ಇರುವುದು ತಿಳಿಯದೆ ಎದುರಿನಿಂದ ಹೋಗುತ್ತಿದ್ದ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸುತ್ತದೆ. ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಸಾಗುವ ವಾಹನಗಳಿಗೂ ಇದರಿಂದ ಅಪಾಯ ತಪ್ಪಿದ್ದಲ್ಲ. ಮೂವತ್ತುಮುಡಿ ಸೇತುವೆ ದಾಟಿದ ಬಳಿಕ ಸಣ್ಣ ತಿರುವು ಇದ್ದು ತಿರುವಿನ ಕೆಲವೇ ಮೀಟರ್ ಅಂತರದಲ್ಲಿ ಡೈವರ್ಶನ್ ಇದೆ. ಇದರಿಂದ ಎದುರಿನಿಂದ ಬರುವ ವಾಹನಗಳನ್ನು ಅಂದಾಜಿಸಲಾಗದೆ ಅಪಘಾತ ನಡೆಯುವ ಭೀತಿ ಕೂಡ ಹೆಚ್ಚಾಗಿದೆ.

ಅರಾಟೆ ಸೇತುವೆ ದುರಸ್ತಿ ಕಾಮಗಾರಿ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಹೆಮ್ಮಾಡಿ ಸಮೀಪ ಅವೈಜ್ಞಾನಿಕವಾಗಿ ರಸ್ತೆಯ ಬಲಕ್ಕೆ ಡೈವರ್ಶನ್ ನೀಡಲಾಗಿದೆ. ಡೈವರ್ಶನ್ ನೀಡಿರುವ ಸ್ಥಳದ ಸ್ವಲ್ಪ ಹಿಂದೆ ಅವೈಜ್ಞಾನಿಕವಾಗಿ ಭಾರಿ ಆಳದ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಇದು ಅಪಘಾತಕ್ಕೆ ಕಾರಣವಾಗುತ್ತಿದ್ದು, ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಸಂಬಂಧಪಟ್ಟ ಗುತ್ತಿಗೆದಾರರು, ರಾ.ಹೆ.ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕು.

— ಇಬ್ರಾಹಿಂ ಎಂ.ಎಚ್. ಆಂಬುಲೆನ್ಸ್ ಚಾಲಕ