ಉಡುಪಿಯಲ್ಲಿ ನೈಸಿಯಾ ವಿಶ್ವಾಸದ ಘೋಷಣೆಯ ವರ್ಷಾಚರಣೆ ನಿಮಿತ್ತ ಐಕ್ಯತಾ ಪ್ರಾರ್ಥನಾ ಕೂಟ ನಡೆಯಿತು. ಡಾ.ಜೆರಾಲ್ಡ್​ ಐಸಾಕ್​ ಲೋಬೊ, ಹೇಮಚಂದ್ರಕುಮಾರ್​, ಲಿಯೋ ಪ್ರವೀಣ್​ ​, ಪ್ರವೀಣ್​ ಮಾಬೆನ್​, ನೊಯೆಲ್​ ಲೂವಿಸ್​, ಪ್ರಶಾಂತ್​ ಜತ್ತನ್ನ ಇದ್ದರು. 
ಉಡುಪಿ

ನೈಸಿಯಾ ಘೋಷಣೆ ವಿಶ್ವಾಸದ ಅಡಿಪಾಯ

* ಬಿಷಪ್​ ಡಾ.ಜೆರಾಲ್ಡ್​ ಲೋಬೊ ಅಭಿಪ್ರಾಯ

* ಉಡುಪಿಯಲ್ಲಿ ಐಕ್ಯತಾ ಪ್ರಾರ್ಥನಾ ಕೂಟ

ಉಡುಪಿ: ಕ್ರೈಸ್ತ ಧರ್ಮಸಭೆ ಯಾವಾಗಲೂ ಏಕತೆಯ ಮಹತ್ವ ಸಾರುತ್ತದೆ. 2ನೇ ವ್ಯಾಟಿಕನ್​ ಮಹಾಸಭೆಯಲ್ಲಿ ಎಲ್ಲ ಕ್ರೈಸ್ತರ ಏಕತೆ ಪುನರ್​ ಸ್ಥಾಪಿಸುವುದು ಪ್ರಮುಖ ಕಾಳಜಿಯಾಗಿತ್ತು. ನೈಸಿಯಾ ಘೋಷಣೆಯು ಕ್ರೈಸ್ತ ಬಂಧುಗಳಿಗೆ ವಿಶ್ವಾಸದ ಅಡಿಪಾಯವಾಗಿದೆ. ಯಾವುದೇ ಸಭೆಗಳಿಗೂ ಸೇರಿದ್ದರೂ ಸಹ ಒಂದೇ ವಿಶ್ವಾಸದ ಘೋಷಣೆಯು ಏಕತೆ ಪ್ರಚುರಪಡಿಸಿದಂತಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ.ಡಾ.ಜೆರಾಲ್ಡ್​ ಐಸಾಕ್​ ಲೋಬೊ ಅಭಿಪ್ರಾಯಪಟ್ಟರು.
ಉಡುಪಿಯ ಯುಬಿಎಂ ಜುಬಿಲಿ ಮೆಮೋರಿಯಲ್​ ಸಭಾಂಗಣದಲ್ಲಿ ಯುನೈಟೆಡ್​ ಬಾಸೆಲ್​ ಮಿಷನ್​ ಚರ್ಚ್​, ಉಡುಪಿ ಧರ್ಮಪ್ರಾಂತ್ಯದ ಐಕ್ಯತಾ ಆಯೋಗ ಮತ್ತು ಆಲ್​ ಕರ್ನಾಟಕ ಯುನೈಟೆಡ್​ ಕ್ರಿಶ್ಚಿಯನ್​ ಫೋರಮ್​ ಫಾರ್​ ಹ್ಯೂಮನ್​ ರೈಟ್ಸ್​ ಆಶ್ರಯದಲ್ಲಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ನೈಸಿಯಾ ವಿಶ್ವಾಸದ ಘೋಷಣೆ ಒಡಬಂಡಿಕೆಯ 1700ನೇ ವರ್ಷಾಚರಣೆ ನಿಮಿತ್ತ ಗುರುವಾರ (ಮಾ.19) ಸಂಜೆ ಆಯೋಜಿಸಿದ್ದ ಐಕ್ಯತಾ ಪ್ರಾರ್ಥನಾ ಕೂಟದಲ್ಲಿ ಮಾತನಾಡಿದರು.

ವಿಶ್ವಾಸದ ಭದ್ರ ಬುನಾದಿ

ಚರ್ಚ್​ ಆಫ್​ ಸೌತ್​ ಇಂಡಿಯಾ ಕರ್ನಾಟಕ ಸದರ್ನ್​ ಡಯಾಸಿಸ್​ನ ಧರ್ಮಾಧ್ಯಕ್ಷ ಅತಿ ವಂ.ಹೇಮಚಂದ್ರಕುಮಾರ್​ ಮಾತನಾಡಿ, ನೈಸಿಯಾ ವಿಶ್ವಾಸದ ಘೋಷಣೆ ಕ್ರೈಸ್ತರು ದೇವರಲ್ಲಿ ಇಟ್ಟಿರುವ ವಿಶ್ವಾಸ ಭದ್ರ ಬುನಾದಿಯಾಗಿದೆ. 1700 ವರ್ಷದ ಬಳಿಕವೂ ಕ್ರೈಸ್ತರೆಲ್ಲ ಒಟ್ಟಾಗಿ ಬದುಕಲು ಪ್ರೇರೇಪಿಸುತ್ತಿದೆ. ಯಾವ ರೀತಿಯಲ್ಲಿ ಕ್ರೈಸ್ತ ಸಭೆ ಬಲಪಡಿಸಲು ಸಾಧ್ಯ ಎನ್ನುವುದು ಬೈಬಲ್​ನಲ್ಲಿ ವಿವಿಧೆಡೆ ಉಲ್ಲೇಖಿಸಲಾಗಿದೆ. ನಮ್ಮ ಸಭೆಗಳಲ್ಲಿ ವಿಶ್ವಾಸದ ಮಂತ್ರ ಪಠಿಸುವುದರಿಂದ ನಮ್ಮಲ್ಲಿನ ಏಕತೆ ಇನ್ನಷ್ಟು ಭದ್ರಪಡಿಸಲು ಸಹಕಾರಿ ಎಂದರು.
ಗೋವಾ ಡಿವೈನ್​ ಸಿಂಗ್​ ಧ್ಯಾನ ಮಂದಿರದ ಮುಖ್ಯಸ್ಥ ವಂ.ರೊವಲ್​ ಶುಭದೀಪ್​ ಡಿಸೋಜಾ ಮತ್ತು ಕರ್ನಾಟಕ ಥಿಯೋಲೋಜಿಕಲ್​ ಕಾಲೇಜ್​ ಬಲ್ಮಠ ಮಂಗಳೂರಿನ ಪ್ರಾಂಶುಪಾಲ ವಂ.ಡಾ. ಎಚ್​.ಎಂ. ವಾಟ್ಸನ್​ ಅವರು ನೈಸಿಯಾ ವಿಶ್ವಾಸದ ಘೋಷಣೆಯ ಐತಿಹಾಸಿಕ ಚರಿತ್ರೆ ಮತ್ತು ಆಧ್ಯಾತ್ಮಿಕ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ವಂ.ಸಂತೋಷ್​, ಭಗಿನಿ ಪ್ರಿಯಾ ತಂಡದಿಂದ ವಿಶ್ವಾಸ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ವಂ.ಲಿಯೋ ಪ್ರವೀಣ್​, ವಂ.ಪ್ರವೀಣ್​ ಮಾಬೆನ್​, ವಂ.ನೊಯೆಲ್​ ಲೂವಿಸ್​, ಪ್ರಶಾಂತ್​ ಜತ್ತನ್ನ, ರೋಮನ್​ ಕ್ಯಾಥೊಲಿಕ್​, ಓಥೋರ್ಡಕ್ಸ್​, ಸಿಎಸ್​ಐ, ಯುಬಿಎಂ ಸಭೆಗಳ ಧರ್ಮಗುರುಗಳು, ಪಾಸ್ಟರ್ಸ್​, ಧರ್ಮಭಗಿನಿಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ವಂ.ವಿಜಯ್​ ಹಾರ್ವಿನ್​ ಪ್ರಾರ್ಥಸಿದರು. ವಂ.ಸಂತೋಷ್​ ಸ್ವಾಗತಿಸಿದರು. ಎಬನೇಜರ್​ ಕ್ರಿಸ್ಟೋಫರ್​ ಕರ್ಕಡ ವಂದಿಸಿದರು. ವಂ.ಡೆನಿಸ್​ ಡೆಸಾ ಕಾರ್ಯಕ್ರಮ ನಿರೂಪಿಸಿದರು.
"

ನಿಜವಾದ ಏಕತೆ ಆತ್ಮಿಕ ಪರಿವರ್ತನೆಯಿಂದ ಆರಂಭವಾಗುತ್ತದೆ. ವಿನಯ, ಪರಸ್ಪರ ಕ್ಷಮೆ ಮತ್ತು ಒಟ್ಟಾಗಿ ಪ್ರಾರ್ಥಿಸಿದಾಗ ಮಾತ್ರ ನೈಜ ಏಕತೆ ಕಾಣಲು ಸಾಧ್ಯ. ಉಡುಪಿ ಪ್ರದೇಶದ ಕ್ರೈಸ್ತ ಸಭೆಗಳು ವಿವಿಧ ಪರಂಪರೆಯ ಸುಂದರ ತಾಣವಾಗಿದೆ. ಇಲ್ಲಿ ಒಟ್ಟಾಗಿ ಜೀವಿಸುವುದಲ್ಲದೆ ಎಲ್ಲರೂ ಒಂದಾಗಿ ಪ್ರಾರ್ಥಿಸುತ್ತೇವೆ.