ಉಡುಪಿ: ಅರಣ್ಯದ ವಿವಿಧ ಕಾಯ್ದೆಯ ಹಿನ್ನೆಲೆಯಲ್ಲಿ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸಲೂ ಸಹ ತೊಡಕಾಗುತ್ತಿದೆ. ಸೋದೆ ಮಠದ ವಿಶ್ವವಲ್ಲಭ ಶ್ರೀಗಳು ಶಿರಸಿ ಸಮೀಪದ ಹಳ್ಳಿಯಲ್ಲಿರುವ ಹಳೆಯ ದೇವಸ್ಥಾನದ ಪುನಶ್ಚೇತನ ಹಾಗೂ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು 17 ಎಕರೆ ಪ್ರದೇಶವನ್ನು ಮಠಕ್ಕೆ ನೀಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದಕ್ಕೆ ಅರಣ್ಯ ಕಾಯ್ದೆಯ ತೊಡಕು ಎದುರಾಗಿದ್ದು, ಶ್ರೀಕೃಷ್ಣನ ಆಶೀರ್ವಾದದಿಂದ ಆ ತೊಡಕು ನಿವಾರಣೆ ಆಗಲಿದೆ ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ಭಾನುವಾರ (ನ.29) ಸೋದೆ ಮಠದ ಬಾಳೆ ಮುಹೂರ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿ, ರೈತರೂ ಸಹ ಸರ್ಕಾರಿ ಅಧಿಕಾರಿಗಳಿಂದ ಈ ವಿಚಾರವಾಗಿ ಪ್ರತಿನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರು.
ಶ್ರೀ ವಾದಿರಾಜರು 500 ವರ್ಷದ ಹಿಂದೆ ಕಟ್ಟಿದ್ದ ಪ್ರಸ್ತುತ ಹಳೆಯದಾಗಿರುವ ದೇವಸ್ಥಾನವನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳಿಸಿ ಇಂದಿನ ಶ್ರೀಗಳು ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ. ಅಲ್ಲಿ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಬೇಕಿರುವ 17 ಎಕರೆ ಪ್ರದೇಶ ಮಠಕ್ಕೆ ಪಡೆಯಲು ತೊಂದರೆ ಆಗಿದ್ದಾಗಿ ನನ್ನ ಗಮನಕ್ಕೆ ತಂದಿದ್ದಾರೆ. ಇದು ಸ್ವಾಮೀಜಿಯ ಸ್ವಂತಕ್ಕಲ್ಲ, ನಾಡಿಗೆ ಸಮರ್ಪಿಸುವ ಉದ್ದೇಶವಾಗಿದೆ ಎಂದರು.
ನಾವು ಯ:ಕಶ್ಚಿತ್ ಮಾನವರು. ನಾನು ಮಾಡುತ್ತೇನೆ ಎಂದರೆ ಅದು ಗರ್ವವಾಗುತ್ತದೆ. ಆದರೆ, ಶ್ರೀಗಳ ಆಶಯದಂತೆ ಆ ಭಗವಂತ ಶ್ರೀಕೃಷ್ಣನ ಆಶೀರ್ವಾದದಿಂದ ಈ ಕೆಲಸವನ್ನು ಆತನೇ ನಮ್ಮ ಕೈಯಲ್ಲಿ ಮಾಡಿಸುತ್ತಾನೆ ಎಂದು ಮಾರ್ಮಿಕವಾಗಿ ನುಡಿದು, ಈ ವಿಚಾರದಲ್ಲಿ ನನ್ನ ಕೈಲಾದ ಸಹಕಾರ ಮಾಡುವುದಾಗಿ ಭರವಸೆ ನೀಡಿದರು.