ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್
ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ರೂ.53.5 ಲಕ್ಷ ಕೋಟಿ ಗಾತ್ರದ ಬಜೆಟ್ ವಿಕಸಿತ ಭಾರತದತ್ತ ದೃಢಹೆಜ್ಜೆಯಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸುಸ್ಥಿರ ಆರ್ಥಿಕ ಪ್ರಗತಿಯೊಂದಿಗೆ ಉತ್ಪದನಾ ಸಾಮರ್ಥ್ಯ ಹೆಚ್ಚಿಸುವುದು, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ತತ್ವಕ್ಕೆ ಅಗತ್ಯವಿರುವ ಸಂಪನ್ಮೂಲ, ಸೌಲಭ್ಯ ಒದಗಿಸಲಿದೆ. ಅತೀ ವೇಗದ 7 ರೈಲ್ವೆ ಕಾರಿಡಾರ್ಗಳ ಮೂಲಕ ವೇಗದ ಆರ್ಥಿಕ ಪ್ರಗತಿಯನ್ನು ಸಾಧಿಸುವ ಗುರಿ ಹೊಂದಿದೆ. ರಕ್ಷಣಾ ಕ್ಷೇತ್ರಕ್ಕೆ ಆದ್ಯತೆ ನೀಡಿ ದಾಖಲೆಯ ರೂ.7.84 ಲಕ್ಷ ಕೋಟಿ ಅನುದಾನದ ಮೂಲಕ ದೇಶದ ಭದ್ರತೆಗೆ ಆದ್ಯತೆ ನೀಡಲಾಗಿದೆ. ಪ್ರಾದೇಶಿಕ ಮೆಡಿಕಲ್ ಹಬ್ ಗಳ ಮೂಲಕ ಮೆಡಿಕಲ್, ಪ್ರವಾಸೋದ್ಯಮ, ನಿಮ್ಹಾನ್ಸ್ ಆಸ್ಪತ್ರೆಗಳು, ಮೈನಿಂಗ್ ಕಾರಿಡಾರ್, ಬಯೋ ಫಾರ್ಮ, ಎ.ಐ. ಮಿಶನ್ ಮೂಲಕ ಎ.ಐ. ತಂತ್ರಜ್ಞಾನ ಅಭಿವೃದ್ಧಿ ಹಾಗೂ ಇನ್ನಿತರ ಆಧುನಿಕ ತಂತ್ರಜ್ಞಾನಗಳ ಬೆಳವಣಿಗೆಗೆ ಒತ್ತು ನೀಡಲಾಗಿದೆ. ಮೂಲಭೂತ ಸೌಕರ್ಯ, ಕೃಷಿ, ಉದ್ಯೋಗ, ಸೆಮಿ ಕಂಡಕ್ಟರ್, ಅಪರೂಪದ ಖನಿಜಗಳು, ಡೇಟಾ ಸೆಂಟರ್ ಮುಂತಾದ ಕ್ಷೇತ್ರಗಳಲ್ಲಿ ಸ್ವಾವಲಂಬನೆಯ ಯೋಜನೆಗಳು ಅಭಿವೃದ್ಧಿಗೆ ಪೂರಕ. ಒಟ್ಟಿನಲ್ಲಿ ತುಷ್ಟೀಕರಣದ ಮಾನಸಿಕತೆಯಿಂದ ಹೊರ ಬಂದು ಜನಸಾಮಾನ್ಯರನ್ನು ಕೇಂದ್ರವಾಗಿರಿಸಿ ಉತ್ಪಾದನೆ, ಉದ್ಯೋಗ ಮತ್ತು ಸೇವಾ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಪರಿಪೂರ್ಣ ಬಜೆಟ್ ಇದಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ವಕ್ತಾರ ದಿವಾಕರ ಶೆಟ್ಟಿ ಕಾಪು, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.