ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮಾಸಿಕ ಸಭೆಯಲ್ಲಿ ಗುರುರಾಜ್ ಮಲ್ಲಿಯಂಗಡಿ, ಸದಸ್ಯೆ ಸುನೀತಾ, ಇಲಾಖಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.  
ಉಡುಪಿ

ಕಾರ್ಯಗತವಾಗದ ಪ್ಲಾಸ್ಟಿಕ್ ನಿಷೇಧ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮಾಸಿಕ ಸಭೆ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಯಂಗಡಿ ಅಧ್ಯಕ್ಷತೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆಯಿತು.
ಎರಡು ತಿಂಗಳ ಹಿಂದೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ನಿರ್ಣಯ ಮಾಡಿದರೂ ಅದು ಇನ್ನೂ ಕಾರ್ಯಗತಗೊಂಡಿಲ್ಲ ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿ, ಮುಖ್ಯಾಧಿಕಾರಿಯವರು ಈ ಬಗ್ಗೆ ಗಮನ ಹರಿಸಬೇಕು. ಪಂಚಾಯಿತಿ ಸಭೆಯಲ್ಲಿ ಆದ ನಿರ್ಣಯ ಕಾರ್ಯಗತಗೊಳಿಸುವ ಜವಾಬ್ದಾರಿ ಮುಖ್ಯಾಧಿಕಾರಿಯದ್ದು ಎಂದರು.
ಈ ಬಗ್ಗೆ ಉತ್ತರಿಸಿದ ಸದಸ್ಯ ಪ್ರಕಾಶ್ ಆಚಾರ್, ಅಂಗಡಿಗಳಿಗೆ ದಾಳಿ ಮಾಡುವ ಸಂದರ್ಭ ಮುಖ್ಯಾಧಿಕಾರಿ ಕೂಡ ಇರಬೇಕು ಎಂದರು.
ಸದಸ್ಯೆ ಸುನೀತಾ ಮಾತನಾಡಿ, ನಮ್ಮ ಅಂಗಡಿಯಲ್ಲಿ ಎರಡು ತಿಂಗಳಿನಿಂದ ನಿಷೇಧ ಮಾಡಿ ಆರ್ಗಾನಿಕ್ ಪ್ಲಾಸ್ಟಿಕ್ ಬಳಸುತ್ತಿದ್ದೇವೆ, ಆದರೆ ಬೇರೆ ಅಂಗಡಿಗಳಲ್ಲಿ ಇನ್ನೂ ಬಂದ್ ಮಾಡಿಲ್ಲ. ಇದರಿಂದ ನಮಗೆ ತೊಂದರೆ ಆಗುತ್ತಿದೆ, ಅಂಗಡಿಗಳಿಗೆ ಪ್ಲಾಸ್ಟಿಕ್ ವಿತರಣೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ನಿಷೇಧ ಅಗತ್ಯವಾಗಿ ಮಾಡಬೇಕು. ಈ ಬಗ್ಗೆ ಮುಖ್ಯಾಧಿಕಾರಿ ಗಮನಹರಿಸಬೇಕು ಎಂದು ಅಧ್ಯಕ್ಷರು ಹೇಳಿದರು.
ಸುಖಾನಂದ ಶೆಟ್ಟಿ ಸರ್ಕಲ್ ಬಳಿ ಪಾರ್ಕಿಂಗ್ ಮಾಡಿದರೆ ದಂಡ ಹಾಕಲು ಪೊಲೀಸರಿಗೆ ಆದೇಶಿಸಿದ್ದು ಏನಾಗಿದೆ ಎಂದು ಸಂತಾನ್ ಡಿಸೋಜ ಕೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಪಾರ್ಕಿಂಗ್ ಮಾಡಿದವರಿಗೆ ದಂಡ ಹಾಕುತ್ತಿದ್ದಾರೆ ಎಂದರು.
ಅಜಾರು ಬಸ್ಸು ನಿಲ್ದಾಣ ಬೀಳುವ ಸ್ಥಿತಿಯಲ್ಲಿದೆ ಅದನ್ನು ಸರಿಪಡಿಸಬೇಕು ಎಂದು ಉಪಾಧ್ಯಕ್ಷೆ ಪದ್ಮಲತಾ ಹೇಳಿದರು, ಈ ಬಗ್ಗೆ ಗಮನ ಹರಿಸಲಾಗುವುದು. ಆದರೆ ಇಲ್ಲಿ ಬೇರೆ ಕೆಲವೊಂದು ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರು ಬಂದಿದೆ ಎಂದು ಅಧ್ಯಕ್ಷರು ಹೇಳಿದರು.
ಕಿನ್ನಿಗೋಳಿ ಸರ್ಕಲ್‌ನಿಂದ ಗಣೇಶೋತ್ಸವ ಮಂಟಪದವರೆಗೆ ಸರಿಯಾದ ದಾರಿದೀಪ ಇಲ್ಲ. ಈ ಬಗ್ಗೆ ಗಮನ ಹರಿಸಬೇಕು ಎಂದು ಪ್ರಣಿಕ್ ಹೇಳಿದರು.
ಅಮೃತ್ ಯೋಜನೆಗೆ ರೋಡ್ ಕಟ್ಟಿಂಗ್ ಮಾಡಿದ್ದನ್ನು ಸರಿ ಮಾಡಿಲ್ಲ ಎಂದು ಸದಸ್ಯರು ಹೇಳಿದಾಗ ಮಳೆಯ ಕಾರಣ ಸರಿಪಡಿಸುವುದು ಕಷ್ಟಸಾಧ್ಯ. ಮಳೆ ಕಡಿಮೆಯಾದ ಕೂಡಲೇ ಸರಿ ಮಾಡಿಕೊಡುತ್ತೇವೆ ಎಂಬುದಾಗಿ ಭರವಸೆ ನೀಡಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದರು. ವಿವಿಧ ಇಲಾಖಾಧಿಕಾರಿಗಳು, ಸದಸ್ಯರು ಸಭೆಯಲ್ಲಿ ಭಾಗವಹಿಸಿದರು.

ವಸತಿ ನಿವೇಶನಕ್ಕೆ ಜಾಗ ಗುರುತು

ವಸತಿ ನಿವೇಶನಕ್ಕೆ ಕೊಂಡೇಲದಲ್ಲಿ 12 ಎಕರೆ ಜಾಗ ಗುರುತಿಸಲಾಗಿದೆ, ದಾಖಲೆಗಳ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಇದನ್ನು ವಸತಿ ರಹಿತರಿಗೆ ನೀಡಲಾಗುವುದು. ಕೆಲವು ಸರ್ಕಾರಿ ಜಾಗಗಳನ್ನು ಗುರುತಿಸಿ ಇಡಲಾಗುವುದು. ಮುಂದಿನ ದಿನಗಳ ಪಂಚಾಯಿತಿಗೆ ಅಗತ್ಯ ಸಂದರ್ಭಗಳಲ್ಲಿ ಬೇಕಾಗಬಹುದು ಎಂದು ಅಧ್ಯಕ್ಷರು ಹೇಳಿದರು. ಈ ಸಂದರ್ಭ ಲೋಕಯ್ಯ ಸಾಲಿಯಾನ್ ಮಾತನಾಡಿ, ಎಲ್ಲ ಸದಸ್ಯರು ಆಯಾಯ ವಾರ್ಡ್‌ನಲ್ಲಿ ಸರ್ಕಾರಿ ಜಾಗವನ್ನು ಗುರುತಿಸಬೇಕು, ಎಲ್ಲರಿಗೂ ಒಂದೇ ಕಡೆ ಕೊಡುವುದಕ್ಕಿಂತ ಎಲ್ಲ ಕಡೆಗಳಲ್ಲಿ ಹಂಚಿ ಕೊಡಬೇಕು ಎಂದರು.

ಫುಟ್‌ಪಾತ್ ಒತ್ತುವರಿ ಕಿರಿಕಿರಿ

ಕಿನ್ನಿಗೋಳೀಯಲ್ಲಿ ಹೆಚ್ಚಿನ ಕಡೆಗಳಲ್ಲಿ ಫುಟ್‌ಪಾತ್‌ಗಳಲ್ಲಿ ಅಂಗಡಿ ಸಾಮಾನುಗಳನ್ನು ಇಡುತ್ತಿದ್ದಾರೆ. ಇದರಿಂದ ಪಾದಾಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತದೆ ಎಂದು ಲೋಕಯ್ಯ ಸಾಲಿಯಾನ್ ಕೊಂಡೇಲ ಹೇಳಿದರು. ಈ ಬಗ್ಗೆ ಉತ್ತರಿಸಿದ ಪಂಚಾಯಿತಿ ಅಧ್ಯಕ್ಷರು ಅಂತಹ ಅಂಗಡಿಗಳಿಗೆ ನೋಟಿಸ್ ನೀಡಲಾಗುವುದು ಎಂದರು.